ADVERTISEMENT

ಚಿಂತಾಮಣಿಯಲ್ಲಿ ಇ-ಸ್ಟ್ಯಾಂಪಿಂಗ್ ಕಾಗದಕ್ಕೆ ಪರದಾಟ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2012, 19:30 IST
Last Updated 8 ಆಗಸ್ಟ್ 2012, 19:30 IST

ಚಿಂತಾಮಣಿ: ಇ-ಸ್ಟ್ಯಾಂಪಿಂಗ್ (ಛಾಪಾ ಕಾಗದ) ಕಾಗದಗಳು ಸಿಗದೆ ಸಾರ್ವಜನಿಕರು ಪರದಾಡುತ್ತಿದ್ದು, ಪ್ರತಿ ನಿತ್ಯವೂ ಗಂಟೆಗಳ ಕಾಲ ಇ-ಸ್ಟ್ಯಾಂಪಿಂಗ್ ಕೇಂದ್ರದಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಸಕಾಲಕ್ಕೆ ಛಾಪಾ ಕಾಗದಗಳು ಸಿಗದಿರುವುದರಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಸರ್ಕಾರದ ನೀತಿಯಂತೆ ಪಡಿತರ ಚೀಟಿ, ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಅರ್ಜಿಯ ಜೊತೆಗೆ ರೂ. 20 ಮೌಲ್ಯದ ಛಾಪಾ ಕಾಗದದ ಮೇಲೆ ಅಫಿಡವಿಟ್ ಸಲ್ಲಿಸುವುದು ಕಡ್ಡಾಯ. ಆದರೆ ಸೂಕ್ತ ಸಮಯದಲ್ಲಿ ಛಾಪಾ ಕಾಗದ ಪಡೆಯಲು ಸಂಕಷ್ಟ ಪಡುತ್ತಿದ್ದಾರೆ.

`ತಾಲ್ಲೂಕು ಮತ್ತು ನಗರದಾದ್ಯಂತ ಒಂದೇ ಇ-ಸ್ಟಾಂಪಿಂಗ್ ಕೇಂದ್ರವಿದ್ದು, ನಾವು ಇಲ್ಲಿ ಪ್ರತಿ ದಿನ ಸಾಲುಗಟ್ಟಿ ನಿಲ್ಲಬೇಕು. ಎಲ್ಲ ಕೆಲಸ ಕಾರ್ಯಗಳನ್ನು ಬದಿಗಿರಿಸಿ ಬಂದಿದ್ದೆವೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಿಲ್ಲಬೇಕು. ಕೇಂದ್ರದಲ್ಲಿ ಒಂದೇ ಕಂಪ್ಯೂಟರ್ ಮೂಲಕ ಕಾಗದಗಳನ್ನು ವಿತರಿಸುತ್ತಿರುವುದರಿಂದ ವಿಳಂಬವಾಗುತ್ತಿದೆ~ ಎನ್ನುವುದು ಜನರ ದೂರು.

`6ರಿಂದ 7 ಗಂಟೆಗಳ ಕಾಲ ಸಾಲಲ್ಲಿ ನಿಂತು ಛಾಪಾ ಕಾಗದಗಳನ್ನು ಪಡೆಯಬೇಕಾದ ಪರಿಸ್ಥಿತಿ ಉಂಟಾಗಿದೆ~ ಎಂದು ಸ್ಥಳೀಯ ನಿವಾಸಿ ರಮೇಶ್ ತಿಳಿಸಿದರು.`ಸರ್ಕಾರದ ಹಿರಿಯ ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಗಳಲ್ಲಿ ಕೂತು ನಿರ್ಣಯ ಮತ್ತು ಆದೇಶಗಳನ್ನು ಕೈಗೊಳ್ಳುತ್ತಾರೆ.
 
ಆದರೆ ಅದರ ಅನುಷ್ಠಾನಕ್ಕೆ ಎಷ್ಟು ಕಷ್ಟ ಎಂಬುದರ ಬಗ್ಗೆ ಅರಿವಿರುವುದಿಲ್ಲ. ಸರ್ಕಾರದ ಹೊಸ ಆದೇಶಗಳಿಂದ ಜನತೆಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತಿದೆ~ ಎಂದು ವಕೀಲ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

`ಸಾಮಾನ್ಯ ದಿನಗಳಲ್ಲಿ ದಿನಕ್ಕೆ 500ರಿಂದ 600 ಪೇಪರ್‌ಗಳನ್ನು ವಿತರಿಸಲಾಗುತ್ತಿತ್ತು. ಆದರೆ ಈಗ ದಿನಕ್ಕೆ 1000 ಪೇಪರ್ ವಿತರಿಸುತ್ತಿದ್ದರೂ ಬೇಡಿಕೆ ಕಡಿಮೆಯಾಗುತ್ತಿಲ್ಲ. ಆದಾಯ ಪ್ರಮಾಣ ಪತ್ರ ನೀಡಿದರೆ ಗ್ರೀನ್ ಕಾರ್ಡ್ ನೀಡುತ್ತಾರೆ ಎಂಬ ತಪ್ಪು ಕಲ್ಪನೆಯಿಂದ ಜನರು ಮುಗಿಬೀಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಸ್ಪಷ್ಟನೆ ನೀಡುವುದು ಉತ್ತಮ~ ಎಂದು ವಿತರಣಾ ಕೇಂದ್ರದ ಸಿಬ್ಬಂದಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.