ADVERTISEMENT

ಚೀನಾ ವಿರುದ್ಧ ಟಿಬೆಟನ್ನರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ಹುಬ್ಬಳ್ಳಿ: ಟಿಬೆಟನ್ನರ ನ್ಯಾಯಯುತ ಹೋರಾಟಕ್ಕೆ ಅಂತರರಾಷ್ಟ್ರೀಯ ಸಮುದಾಯದ ಬೆಂಬಲವನ್ನು ಕೋರಲು ಟಿಬೆಟ್ ಪ್ರಾಂತೀಯ ಯುವ ಘಟಕ ಮತ್ತು ಮುಂಡಗೋಡದ ಮಹಿಳಾ ಪ್ರಾಂತೀಯ ಅಸೋಸಿಯೇಶನ್ ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.

ಚೀನಾ ಸರ್ಕಾರ ತನ್ನ ಮಿಲಿಟರಿ ಪಡೆಯನ್ನು ಪೂರ್ವ ಟಿಬೆಟಿನ ಸುತ್ತ ಹಾಗೂ ಸೆರತಾ, ದಾಕ್ಗೊ, ಜಾಮ್ತಾಂಗ್ ಮತ್ತು ನಾಗ್ವಾ ಪ್ರದೇಶಗಳಲ್ಲಿ ನಿಯೋಜಿಸಿದೆ. ಚೀನಾ ಆಕ್ರಮಿಸಿಕೊಂಡ ಟಿಬೆಟ್ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅಲ್ಲಿನ ನಾಗರಿಕರಿಂದ ಆತ್ಮಾಹುತಿ ಘಟನೆಗಳು ಹೆಚ್ಚುತ್ತಿವೆ. ಇದು ಕಳೆದ 62 ವರ್ಷಗಳಿಂದ ನಡೆಯುತ್ತಿರುವ ವಸಾಹತುಶಾಹಿ ಶೋಷಣೆ ಮತ್ತು ಹಿಂಸೆಯ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯಲು ಜನರ ಧೈರ್ಯ ಮತ್ತು ಸಂಕಲ್ಪವನ್ನು ತೋರಿಸುತ್ತದೆ ಎಂದರು.

`ಪ್ರಪಂಚದಾದ್ಯಂತ ವಾಸವಾಗಿರುವ ಟಿಬೆಟನ್ನರ ಬೆಂಬಲ ಹಾಗೂ ಧೈರ್ಯ ನಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ನಾವು ಟಿಬೆಟ್ ಅನ್ನು ಸ್ವತಂತ್ರಗೊಳಿಸುತ್ತೇವೆ ಎಂಬ ದೃಢವಿಶ್ವಾಸವನ್ನು ನಮ್ಮಲ್ಲಿ ತುಂಬುತ್ತದೆ~ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಟಿಬೆಟನ್ನರ ಪ್ರತಿಭಟನೆಗೆ ಭಾರತ ಸೇರಿದಂತೆ ಅಂತರಾಷ್ಟ್ರೀಯ ಸಮುದಾಯದಿಂದ ಮಾನ್ಯತೆ ಮತ್ತು ಬೆಂಬಲ ದೊರೆಯಲಿದೆ ಎಂಬ ವಿಶ್ವಾಸವನ್ನು  ಪ್ರತಿಭಟನಾಕಾರರು ವ್ಯಕ್ತಪಡಿಸಿದರು.

ರಾಣಿ ಚೆನ್ನಮ್ಮ ವೃತ್ತದಿಂದ ಮಿನಿ ವಿಧಾನಸೌಧದ ತಹಶೀಲ್ದಾರ್ ಕಚೇರಿತನಕ ಮೆರವಣಿಗೆಯಲ್ಲಿ ತೆರಳಿ ಚೀನಾ ನಡೆಸುತ್ತಿರುವ ದಮನ ಕಾರ್ಯದ ಬಗ್ಗೆ ಭಿತ್ತಿ ಪತ್ರ ಪ್ರದರ್ಶಿಸಿ, ತಹಶೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.