ADVERTISEMENT

ಚೆನ್ನಕೇಶವನಿಗೆ ಮುಸ್ಲಿಂ ಖಾಜಿಯ ವಂದನೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 7:55 IST
Last Updated 5 ಏಪ್ರಿಲ್ 2012, 7:55 IST

ಬೇಲೂರು: ಬುಧವಾರ ಆರಂಭವಾದ ಇಲ್ಲಿನ ಚೆನ್ನಕೇಶವಸ್ವಾಮಿ ರಥೋತ್ಸವ ಹಲವು ವೈಶಿಷ್ಟ್ಯಗಳನ್ನು ಹೊಂದಿ ಭಕ್ತರನ್ನು ಸೆಳೆಯುತ್ತದೆ.

ರಥದ ಪೀಠದ ಮೇಲೆ ಉತ್ಸವ ಮೂರ್ತಿಯನ್ನು ಕೂರಿಸದೆ ಉಯ್ಯಾಲೆಯಂತೆ ಕಟ್ಟಲಾಗುತ್ತದೆ. ರಥೋತ್ಸವಕ್ಕೂ ಮುನ್ನ ಮುಸ್ಲಿಂ ಖಾಜಿಯೊಬ್ಬರು ದೇವರಿಗೆ ಮುಜರೆ (ವಂದನೆ) ಸಲ್ಲಿಸುವುದು ಮತ್ತೊಂದು ವಿಶೇಷವಾಗಿದೆ.

ಎರಡು ದಿನಗಳ ಕಾಲ ನಡೆಯುವ ರಥೋತ್ಸವದ ಮೊದಲ ದಿನವಾದ ಬುಧವಾರ ನಡೆದ ಗಳಿಗೆ ತೇರಿನಲ್ಲಿ ಸಹಸ್ರಾರು ಜನರು ಪಾಲ್ಗೊಂಡಿದ್ದರು.

ಬಹುತೇಕ ದೇವಾಲಯಗಳ ರಥೋತ್ಸವ ದಲ್ಲಿ ದೇವರ ಉತ್ಸವ ಮೂರ್ತಿಯನ್ನು ರಥದ ವೇದಿಕೆಯ ಮೇಲೆ ಕೂರಿಸಿ ರಥವನ್ನು ಎಳೆಯಲಾಗುತ್ತದೆ. ಆದರೆ ಚೆನ್ನಕೇಶವ ಸ್ವಾಮಿ ರಥೋತ್ಸವದಲ್ಲಿ ಉತ್ಸವ ಮೂರ್ತಿ ಯನ್ನು ರಥದ ವೇದಿಕೆಯ ಮೇಲೆ ಕೂರಿಸದೆ, ದೇವರ ಅಡ್ಡೆಯನ್ನು ಉಯ್ಯಾಲೆಯಂತ ರಥಕ್ಕೆ ಕಟ್ಟಲಾಗುತ್ತದೆ. ರಥ ಚಲಿಸುವಾಗ ಉತ್ಸವ ಮೂರ್ತಿ ಓಲಾಡುತ್ತದೆ. ಈ ದೃಶ್ಯ ವಿಶಿಷ್ಟವಾಗಿದೆ. ರಥದ ಮೇಲೆ ಉಯ್ಯಾಲೆ ಯಲ್ಲಿ ಚಲಿಸುವ ಗೋವಿಂದನನ್ನು ನೋಡಿದರೆ ಮೋಕ್ಷ ಸಿಗುತ್ತದೆ ಎಂಬುದು ಪುರಾಣಗಳಲ್ಲಿ ಹೇಳಲಾಗಿದೆ.

ಚೆನ್ನಕೇಶವಸ್ವಾಮಿ ರಥೋತ್ಸವದ ಮತ್ತೊಂದು ವಿಶೇಷತೆ ಎಂದರೆ ಮುಸ್ಲಿಂ ಸಮುದಾಯವು ಚೆನ್ನಕೇಶವ ದೇವಾಲಯ ದೊಂದಿಗೆ ಭಕ್ತಿಯುತ ಸಂಬಂಧ ಹೊಂದಿರು ವುದು ಗಮನಾರ್ಹವಾಗಿದೆ. ರಥ ಎಳೆಯುವ ಮುನ್ನ ಬೇಲೂರು ಸಮೀಪದ ದೊಡ್ಡ ಮೇದೂರಿನ ಮುಸ್ಲಿಂ ಖಾಜಿ ಸೈಯ್ಯದ್ ಸಜ್ಜಾದ್ ಸಾಬ್ ಖಾದ್ರಿ  ಚೆನ್ನಕೇಶವನಿಗೆ ಮುಜರೆ (ವಂದನೆ) ಸಲ್ಲಿಸುತ್ತಾರೆ. ಬುಧವಾರ ನಡೆದ ರಥೋತ್ಸವದಲ್ಲೂ ದೇವರಿಗೆ ವಂದನೆ ಸಲ್ಲಿಸಿದ ಇವರು, ದೇವರು ಬೇರೆ ಇಲ್ಲ. ದೇವರು ಒಬ್ಬನೆ, ನಮ್ಮ ಪುರಾತನ ಸಂಪ್ರದಾ ಯದಂತೆ ತಾವು ದೇವರಿಗೆ ಮುಜುರೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.

ಹೆಚ್ಚಿದ ಭಕ್ತರ ಸಂಖ್ಯೆ: ಎರಡು ದಿನಗಳ ರಥೋತ್ಸವದ ಮೊದಲ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ರಥ ಎಳೆಯುವ ಸಂದರ್ಭದಲ್ಲಿ ನೆರೆದ ಭಕ್ತರು ಬಾಳೆಹಣ್ಣಿಗೆ ದವನದ ಕೊನೆಯನ್ನು ಚುಚ್ಚಿ ರಥಕ್ಕೆ ಎಸೆದು ಭಕ್ತಿ ಸಮರ್ಪಣೆ ಮಾಡಿದರು. ರಥೋತ್ಸವದ ಅಂಗವಾಗಿ ಚೆನ್ನಕೇಶವಸ್ವಾಮಿ, ಸೌಮ್ಯನಾಯಕಿ ಮತ್ತು ರಂಗನಾಯಕಿ ಅಮ್ಮನವರ ಮೂಲ ವಿಗ್ರಹಗಳನ್ನು ಚಿನ್ನಾ ಭರಣಗಳಿಂದ ವಿಶೇಷವಾಗಿ ಅಲಂಕರಿಸ ಲಾಗಿತ್ತು. ಭಕ್ತರಿಗೆ ದೇವಾಲಯದ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾ ಯಿತು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮಾರ್ಗದರ್ಶಿಗಳ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರಿಗೆ ಮಜ್ಜಿಗೆ, ಪಾನಕ, ಕೋಸಂಬರಿಯನ್ನು ವಿತರಿಸ ಲಾಯಿತು.
ಗುರುವಾರ ಮಧ್ಯಾಹ್ನ ಉಳಿದ ಮೂರು ಬೀದಿಗಳಲ್ಲಿ ಎಳೆಯಲಾಗುತ್ತದೆ.

ವೆಬ್‌ಸೈಟ್‌ಗೆ ಚಾಲನೆ
ಚೆನ್ನಕೇಶವಸ್ವಾಮಿ ದೇವಾಲಯಕ್ಕೆ ಸಂಬಂಧಿಸಿದ ನೂತನ ವೆಬ್‌ಸೈಟ್‌ಗೆ ಜಿಲ್ಲಾಧಿಕಾರಿ ಮೋಹನ್‌ರಾಜ್ ಬುಧವಾರ ಚಾಲನೆ ನೀಡಿದರು.

ಈ ವೆಬ್‌ಸೈಟ್‌ನಲ್ಲಿ ದೇವಾಲಯದ ಸಂಪೂರ್ಣ ಮಾಹಿತಿ, ಉತ್ಸವ, ಸೇವೆಗಳ ವಿವರ ನೀಡಲಾಗಿದೆ.        www.ckstemple.in   ನಲ್ಲಿ ದೇವಾಲಯದ ಮಾಹಿತಿ ಪಡೆಯಬಹುದು. ಈ ಸಂದರ್ಭದಲ್ಲಿ ಶಾಸಕ ವೈ.ಎನ್.ರುದ್ರೇಶ್‌ಗೌಡ, ಮಾಜಿ ಸಂಸದ ಎಚ್.ಕೆ. ಜವರೇಗೌಡ, ಎ.ಸಿ. ಪಲ್ಲವಿ ಆಕುರಾತಿ, ತಹಶೀಲ್ದಾರ್ ಎನ್.ಎಸ್. ಚಿದಾನಂದ್, ಪ್ರಧಾನ ಅರ್ಚಕ ಕೃಷ್ಣಸ್ವಾಮಿ ಭಟ್ಟರ್ ಹಾಜರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT