ADVERTISEMENT

‘ಛೋಟಾ ಮುಂಬೈ’ ಆಧಿಪತ್ಯಕ್ಕೆ ಪೈಪೋಟಿ

ಹುಬ್ಬಳ್ಳಿ–ಧಾರವಾಡ ಪೂರ್ವ ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್‌–ಬಿಜೆಪಿ ನಡುವೆ ನೇರ ಹಣಾಹಣಿ

ಬಸವರಾಜ ಸಂಪಳ್ಳಿ
Published 5 ಮೇ 2018, 11:30 IST
Last Updated 5 ಮೇ 2018, 11:30 IST
‘ಛೋಟಾ ಮುಂಬೈ’ ಆಧಿಪತ್ಯಕ್ಕೆ ಪೈಪೋಟಿ
‘ಛೋಟಾ ಮುಂಬೈ’ ಆಧಿಪತ್ಯಕ್ಕೆ ಪೈಪೋಟಿ   

ಹುಬ್ಬಳ್ಳಿ: ‘ಛೋಟಾ ಮುಂಬೈ’ ಎಂದೇ ಗುರುತಿಸಿಕೊಂಡಿರುವ ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ (ಪರಿಶಿಷ್ಟ ಜಾತಿ ಮೀಸಲು)ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.

ಕಾಂಗ್ರೆಸ್‌ನ ಪ್ರಸಾದ ಅಬ್ಬಯ್ಯ ಮತ್ತು ಬಿಜೆಪಿಯ ಚಂದ್ರಶೇಖರ ಗೋಕಾಕ ನಡುವೆ ಜಿದ್ದಾಜಿದ್ದಿನ ಪೈಪೋಟಿಯಿಂದಾಗಿ ಚುನಾವಣಾ ಕಣ ರಂಗೇರಿದೆ. ಜೆಡಿಎಸ್‌ ಬೆಂಬಲ ದೊಂದಿಗೆ ಕಣಕ್ಕಿಳಿದಿರುವ ಬಿಎಸ್‌ಪಿ ಅಭ್ಯರ್ಥಿ ಶೋಭಾ ಬಳ್ಳಾರಿ ಸೇರಿದಂತೆ ಇನ್ನುಳಿದ ಆರು ಅಭ್ಯರ್ಥಿಗಳೂ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಟಿಕೆಟ್‌ ಸಿಗದೇ ಅಸಮಾಧಾನ ಗೊಂಡಿರುವ ಬಿಜೆಪಿ ಮುಖಂಡರ ಮತದಾನ ದಿನದ ಗುಟ್ಟೇನು ಎಂಬುದನ್ನು ಕ್ಷೇತ್ರದ ಜನರು ಚರ್ಚಿಸುತ್ತಿದ್ದಾರೆ. ಅದುವೇ ಫಲಿತಾಂಶ ನಿರ್ಧರಿಸಲಿದೆ ಎನ್ನುವುದೂ ಅವರ ಅಭಿಮತ.

ADVERTISEMENT

‘ಸಂಘ ಪರಿವಾರದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರದಲ್ಲಿ ಎಡಬಿಡದೇ ಮನೆ, ಮನೆಗೆ ಅಡ್ಡಾಡುತ್ತಿದ್ದಾರೆ. ಅಸಮಾಧಾನ ಶಮನ ಮಾಡಿದ್ದಾರೆ. ಹೀಗಾಗಿ, ಅಚ್ಚರಿಯ ಫಲಿತಾಂಶ ನಮ್ಮದಾಗಲಿದೆ’ ಎಂಬುದು ಬಿಜೆಪಿ ಮುಖಂಡರ ವಾದ.

‘ಕ್ಷೇತ್ರಕ್ಕೆ ಹೊರಗಿನಿಂದ ಬಂದಿರುವ ಸಂಘ ಪರಿವಾರ ಮತ್ತು ಬಿಜೆಪಿ ಮುಖಂಡರು, ತಮ್ಮ ಸಾಂಪ್ರದಾಯಿಕ ಮತದಾರರ ಮನೆಗಳಿಗೆ ತೆರಳಿ ಮತಯಾಚಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಇರುವ ಅಲ್ಪಸಂಖ್ಯಾತರ ಮನೆಗಳತ್ತ ಸುಳಿಯುತ್ತಿಲ್ಲ. ಇದು ನಮಗೆ ಪ್ಲಸ್‌ ಆಗಲಿದೆ. ಹಾಗಂತ ಮೈಮರೆಯುವಂತಿಲ್ಲ’ ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡರು.

ಕಾಂಗ್ರೆಸ್‌ನಲ್ಲೂ ತಲೆದೋರಿದ್ದ ಭಿನ್ನಮತವನ್ನು ಸ್ವತ ಮುಖ್ಯಮಂತ್ರಿ ಅವರೇ ಖುದ್ದು ಬಗೆಹರಿಸಿರುವುದರಿಂದ ಚುನಾವಣೆಯಲ್ಲಿ ಹಾನಿ ಮಾಡುವ ಸಾಧ್ಯತೆ ವಿರಳ ಎಂಬ ಮಾತು ಕೇಳಿಬರುತ್ತಿದೆ. ಕಳೆದ ಬಾರಿ ಬಿಜೆಪಿ, ಕೆಜೆಪಿ ಅಭ್ಯರ್ಥಿಗಳ ಸ್ಪರ್ಧೆಯ ಲಾಭ ಕಾಂಗ್ರೆಸ್‌ಗೆ ವರವಾಗಿತ್ತು. ಆದರೆ, ಈ ಬಾರಿ ಎರಡೂ ಒಂದಾಗಿರುವುದು ಹಾಲಿ ಶಾಸಕರ ನಿದ್ದೆಗೆಡಿಸಿದೆ.

ನಾಮಪತ್ರ ಸಲ್ಲಿಸಲು ಕೊನೆಯ ಎರಡು ದಿನಗಳಿರುವಾಗ ಬಿಜೆಪಿ ತನ್ನ ಅಭ್ಯರ್ಥಿ ಘೋಷಿಸಿರುವುದರಿಂದ ಪ್ರಚಾರಕ್ಕೆ ಕಡಿಮೆ ಸಮಯ ಸಿಕ್ಕಿದೆ. ಆದರೂ, ಪ್ರಚಾರವನ್ನು ಚುರುಕುಗೊಳಿಸಿದೆ. ಆದರೆ, ಕಾಂಗ್ರೆಸ್‌ ಅಭ್ಯರ್ಥಿ ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.

20 ವಾರ್ಡ್‌ಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ,9 ಮಂದಿ ಬಿಜೆಪಿ, 8 ಮಂದಿ ಕಾಂಗ್ರೆಸ್‌, ಇಬ್ಬರು ಜೆಡಿಎಸ್‌ ಹಾಗೂ ಒಬ್ಬರು ಪಕ್ಷೇತರ ಪಾಲಿಕೆ ಸದಸ್ಯರಿದ್ದಾರೆ. ಇವರೂ ಸಹ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ತಂದುಕೊಡಲು ಬೆವರಿಳಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ಮುಸ್ಲಿಂ ವೋಟುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಉಳಿದಂತೆ ಲಿಂಗಾಯತ, ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತಗಳು ನಂತರದ ಸ್ಥಾನದಲ್ಲಿವೆ. ಅಹಿಂದ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವವರಿಗೆ ಗೆಲುವಿನ ಹಾದಿ ಸುಗಮವಾಗಲಿದೆ ಎಂಬುದು ಕ್ಷೇತ್ರದ ರಾಜಕೀಯ ಲೆಕ್ಕಾಚಾರವಾಗಿದೆ.

ಕೈ ಪ್ರಾಬಲ್ಯದ ಕ್ಷೇತ್ರ: 1957ರಿಂದ 2004ರ ವರೆಗೆ ಹುಬ್ಬಳ್ಳಿ ಶಹರ ವಿಧಾನಸಭಾ ಕ್ಷೇತ್ರವೆಂದೇ ಗುರುತಿಸಿಕೊಂಡಿದ್ದ ಈ ಕ್ಷೇತ್ರಕ್ಕೆ ನಡೆದ 12 ಚುನಾವಣೆಗಳಲ್ಲಿ ಕಾಂಗ್ರೆಸ್‌ ಎಂಟು, ಬಿಜೆಪಿ ಎರಡು ಹಾಗೂ ಭಾರತೀಯ ಜನ ಸಂಘ ಮತ್ತು ಜೆಎನ್‌ಪಿ ತಲಾ ಒಂದು ಬಾರಿ ಜಯಗಳಿಸಿವೆ.

2008ರಲ್ಲಿ ಕ್ಷೇತ್ರ ಪುನರ್ ವಿಗಡೆಯಾದ ಬಳಿಕ ನಡೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿ ತಲಾ ಒಮ್ಮೊಮ್ಮೆ ಗೆದ್ದಿದ್ದಾರೆ. 2018ರ ಚುನಾವಣೆಯಲ್ಲಿ ಪೂರ್ವ ಕ್ಷೇತ್ರದ ಆಧಿಪತ್ಯ ಯಾರ ಪಾಲಾಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಓಣಿ, ಚಾಳ, ಹಕ್ಕಲು ಒಳಗೊಂಡ ಕಿಷ್ಕಿಂಧೆ

ಪೂರ್ವ ಕ್ಷೇತ್ರ ಅತ್ಯಂತ ಜನನಿಬಿಡ ಪ್ರದೇಶಗಳನ್ನು ಒಳಗೊಂಡಿದೆ. ಓಣಿ, ಚಾಳ, ಹಕ್ಕಲು, ಕಾಲೊನಿಗಳಿಂದಾಗಿ ಇತ್ತ ನಗರವೂ ಅಲ್ಲದ, ಅತ್ತ ಹಳ್ಳಿಯೂ ಅಲ್ಲದಂತಿದೆ.

ಬಡವರು, ಕಡುಬಡವರು, ಸಣ್ಣ ಮತ್ತು ಮಧ್ಯಮ ಕುಟುಂಬಗಳು ಹಾಗೂ 22 ಕೊಳೆಚೆ ಪ್ರದೇಶಗಳಿಂದ ಕೂಡಿರುವ ಈ ಕ್ಷೇತ್ರ ಹತ್ತಾರು ಸಮಸ್ಯೆಗಳನ್ನು ಹಾಸುಹೊದ್ದಿದೆ. ಮಾರುಕಟ್ಟೆ ಪ್ರದೇಶವನ್ನು ಒಳಗೊಂಡಿರುವ ಈ ಕ್ಷೇತ್ರವು ‘ಛೋಟಾ ಮುಂಬೈ’ ಎಂಬ ಖ್ಯಾತಿ ಗಳಿಸಿದೆ.

‘ಒಂದೇ ಒಂದು ಸರ್ಕಾರಿ ಕಾಲೇಜು ಮತ್ತು ಆಸ್ಪತ್ರೆ, ಸಾಂಸ್ಕೃತಿಕ ಕೇಂದ್ರಗಳು ಇಲ್ಲ. ನಿರುದ್ಯೋಗ, ವಸತಿ, ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವುದು ಈ ಕ್ಷೇತ್ರವನ್ನು ಇದುವರೆಗೆ ಪ್ರತಿನಿಧಿಸಿದವರ ಕಾರ್ಯವೈಖರಿಗೆ ಕನ್ನಡಿಯಾಗಿದೆ’ ಎನ್ನುತ್ತಾರೆ ಹಳೇ ಹುಬ್ಬಳ್ಳಿ ಹಿರೇಪೇಟೆ ನಿವಾಸಿ ಮಂಜುನಾಥ ಕಾಟ್ಕರ್‌.

‘ಜಿಲ್ಲೆ, ಹೊರ ಜಿಲ್ಲೆಗಳಿಂದ ನಿತ್ಯ ಇಲ್ಲಿನ ಮಾರುಕಟ್ಟೆಗೆ ಲಕ್ಷಾಂತರ ಜನ ವ್ಯಾಪಾರ, ವಹಿವಾಟಿಗೆ ಬಂದು ಹೋಗುತ್ತಾರೆ. ಆದರೆ, ಒಂದೇ ಒಂದು ರಸ್ತೆಯೂ ಚೆನ್ನಾಗಿಲ್ಲ. ವಾಹನಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ’ ಎನ್ನುತ್ತಾರೆ ದಾಜಿಬಾನಪೇಟೆ ಆಟೊ ನಿಲ್ದಾಣದ ರಿಕ್ಷಾ ಚಾಲಕರಾದ ಮುನ್ನಾ ನಾಯಕವಾಡಿ ಮತ್ತು ರಾಜು ಕೆ. ಸಾಬೂಜಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.