ಧಾರವಾಡ: ‘ಭ್ರಷ್ಟಾಚಾರದಲ್ಲಿ ಮೊದಲನೇ ಸ್ಥಾನ ಗಳಿಸಿರುವ ರಾಜ್ಯದ ಬಿಜೆಪಿ ಸರ್ಕಾರ, ಈಗ ಜನ ವಿರೋಧಿ ನೀತಿ ಅನುಸರಿಸುವಲ್ಲಿಯೂ ಮೊದಲ ಸ್ಥಾನ ಪಡೆಯಲು ಮುಂದಾಗಿದೆ‘ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಟೀಕಿಸಿದರು.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಕಟ್ಟಡ ಪರವಾನಗಿ ಶುಲ್ಕ ಹೆಚ್ಚಳ ಮಾಡಿದ್ದನ್ನು ವಿರೋಧಿಸಿ ಪಾಲಿಕೆ ಪ್ರತಿಪಕ್ಷದ ನಾಯಕ ದೀಪಕ ಚಿಂಚೋರೆ ನಡೆಸಿದ್ದ ಸಹಿ ಸಂಗ್ರಹ ಚಳವಳಿ ಹಾಗೂ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿಯೂ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಅಸಮಾಧಾನವಿಲ್ಲ: ‘ಹನ್ನೆರಡು ವರ್ಷದ ಬಳಿಕ ಕೆಪಿಸಿಸಿ ಪುನರ್ ರಚನೆಯಾಗಿದೆ. ಕಾಂಗ್ರೆಸ್ ದೊಡ್ಡ ಪಕ್ಷವಾದ ಕಾರಣ ಆಕಾಂಕ್ಷಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಮರ್ಥ ನಾಯಕರು ನಮ್ಮ ಪಕ್ಷದಲ್ಲಿದ್ದು, ಅವರು ಪ್ರತಿಕ್ರಿಯೆ ನೀಡಿರುವುದು ಸ್ವಾಭಾವಿಕ. ಇಂಥವರನ್ನು ಪಕ್ಷದ ಸಂಘಟನೆ ಕೆಲಸಕ್ಕೆ ಬಳಸಿಕೊಳ್ಳಲಾಗುವುದು. ಯಾವುದೇ ಅಸಮಾಧಾನ ಇಲ್ಲ’ ಎಂದು ಪರಮೇಶ್ವರ ಸ್ಪಷ್ಟಪಡಿಸಿದರು.
ಪಕ್ಷದಲ್ಲಿ ಯಾವುದೇ ಗೊಂದಲ, ಅನುಮಾನ ಇಲ್ಲ. ಎಲ್ಲರೂ ಸೇರಿ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಪ್ರಾಂತವಾರು, ಜಾತಿವಾರು ಯಾವುದೇ ಅನ್ಯಾಯವಾಗಿಲ್ಲ, ಎಲ್ಲವೂ ಸರಿಯಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.