ADVERTISEMENT

ಜಮೀನು ಹರಾಜು ಖಂಡಿಸಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2011, 19:00 IST
Last Updated 1 ಏಪ್ರಿಲ್ 2011, 19:00 IST
ಜಮೀನು ಹರಾಜು ಖಂಡಿಸಿ ರೈತರ ಪ್ರತಿಭಟನೆ
ಜಮೀನು ಹರಾಜು ಖಂಡಿಸಿ ರೈತರ ಪ್ರತಿಭಟನೆ   

ಶಿವಮೊಗ್ಗ: ರೈತರ ಜಮೀನನ್ನು ಹರಾಜು ಮಾಡುತ್ತಿರುವ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ)ನ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ಶುಕ್ರವಾರ ನಗರದ ಬ್ಯಾಂಕ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ರೈತರು ಪಿಎಲ್‌ಡಿ ಬ್ಯಾಂಕ್‌ನಿಂದ ಸಾಲ ತೆಗೆದುಕೊಂಡಿದ್ದೇನೋ ಸರಿ. ಆದರೆ, ಪ್ರಸಕ್ತ ಸಾಲಿನಲ್ಲಿ ಗುಟ್ಕಾ ಪ್ಲಾಸ್ಟಿಕ್ ಸ್ಯಾಶೆ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೇ ರೀತಿ ಎಲ್ಲ ಬೆಳೆಗಳ ಧಾರಣೆ ಕುಸಿದಿದೆ. ಇಂತಹ ಸಂದರ್ಭದಲ್ಲಿ ರೈತರ ಜಮೀನು ಹರಾಜು ಮಾಡುವುದು ಎಷ್ಟು ಸಮಂಜಸ ಎಂದು ಅವರು ಪ್ರಶ್ನಿಸಿದರು.
ಬ್ಯಾಂಕ್‌ನಲ್ಲಿ ರೈತ ಸಾಲ-ಸೋಲ ಮಾಡಿ ಬೆಳೆದ ಬೆಳೆಗೆ ಕಿಮ್ಮತ್ತಿಲ್ಲದಂತಾಗಿದೆ. ಇನ್ನು ಪ್ಲಾಸ್ಟಿಕ್ ಸ್ಯಾಶೆ ನಿಷೇಧದ ನಂತರ ಅಡಿಕೆಯನ್ನು ಕೇಳುವವರೂ ಇಲ್ಲ. ಇದರಿಂದ ರೈತರ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ತಿಳಿಸಿದರು.

ಅವೈಜ್ಞಾನಿಕ ಬೆಲೆ ನೀತಿ, ಅತಿವೃಷ್ಟಿ, ಅನಾವೃಷ್ಟಿ, ಬೆಳೆಗಳಿಗೆ ಹಲವಾರು ರೋಗಗಳು ಕಾಣಿಸಿಕೊಂಡಿದ್ದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ಈ ಮಧ್ಯೆ ಕಳಪೆ ರಸಗೊಬ್ಬರ, ಕೀಟನಾಶಕಗಳಿಂದ ರೈತರು ಮೋಸ ಹೋಗುತ್ತಿದ್ದಾರೆ. ಈ ಬಗ್ಗೆ ಬಜೆಟ್ ಪೂರ್ವದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕೃಷಿ ಸಚಿವ ಶರದ್ ಪವಾರ್ ಅವರನ್ನು ಭೇಟಿ ಮಾಡಿ, ರೈತರ ಸ್ಥಿತಿ ಮನದಟ್ಟು ಮಾಡಿಕೊಟ್ಟಿದೆ. ಆದ್ದರಿಂದ ರೈತರ ಜಮೀನು ಹರಾಜು, ಟ್ರ್ಯಾಕ್ಟರ್, ಪವರ್‌ಟಿಲ್ಲರ್ ಜಪ್ತಿ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಎಚ್.ಆರ್. ಬಸವರಾಜಪ್ಪ, ಕಡಿದಾಳು ಶಾಮಣ್ಣ, ಡಾ.ಬಿ.ಎನ್. ಚಿಕ್ಕಸ್ವಾಮಿ, ವೈ.ಜಿ. ಮಲ್ಲಿಕಾರ್ಜುನ, ಎಸ್. ಶಿವಮೂರ್ತಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.