ADVERTISEMENT

ಜಿಪಂ ಸಿಇಓ ಅಮಾನತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 19:50 IST
Last Updated 21 ಫೆಬ್ರುವರಿ 2011, 19:50 IST

ರಾಯಚೂರು: ಉದ್ಯೋಗ ಖಾತರಿ ಯೋಜನೆಯಡಿಯಲ್ಲಿನ ಅನ್ಯಾಯವನ್ನು ಸರಿಪಡಿಸಬೇಕು. ಇದಕ್ಕೆ ಕಾರಣರಾಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ನೂರಾರು ಕೂಲಿಕಾರರು ಸೋಮವಾರ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು.

ಜಿಲ್ಲಾಧಿಕಾರಿ ಅಥವಾ ಬೇರೆ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಈ ಅನ್ಯಾಯವನ್ನು ಸರಿಪಡಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.ಉದ್ಯೋಗ ಖಾತರಿ ಯೋಜನೆಯಲ್ಲಿನ ಅನ್ಯಾಯ ಸರಿಪಡಿಸಲು  ಪದೇ ಪದೇ ಕೋರಿದರೂ ಜಿಪಂ ಸಿಇಓ ಸುಳ್ಳು ಆಶ್ವಾಸನೆ ನೀಡಿದ್ದಾರೆ. ಈ ತಿಂಗಳ 17ರಿಂದ ಅನಿರ್ದಿಷ್ಟ ಧರಣಿ ಉಪವಾಸ ನಡೆಸುತ್ತಿದ್ದರೂ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಿಇಓ ಬಗ್ಗೆ ವೈಯಕ್ತಿಕ ದ್ವೇಷವಿಲ್ಲ. ಆದರೆ ಉದ್ಯೋಗ ಖಾತರಿ ಯೋಜನೆಯಡಿ ನಡೆದ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆ ಗಮನಿಸಬೇಕು. ಜಿಲ್ಲಾಧಿಕಾರಿ ಅನ್ಬುಕುಮಾರ ಮನವಿ ಸ್ವೀಕರಿಸಿದರು. ಜೆ.ಬಿ ರಾಜು, ಅಂಬಣ್ಣ ಅರೋಲಿ, ಕೆ.ಪಿ ಅನಿಲಕುಮಾರ, ವಿದ್ಯಾ, ರಾಘವೇಂದ್ರ ಬೊರೆಡ್ಡಿ, ಜಯಮ್ಮ, ಲಕ್ಷ್ಮಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.