`ಕೊಡವ ಭಾಷೆಗೆ 3ನೇ ಸ್ಥಾನ ದೊರಕಿಸಲು ಪ್ರಯತ್ನ~
ಮಡಿಕೇರಿ: ಕೊಡವ ಭಾಷೆಯನ್ನು ಮೂರನೇ ಆಡಳಿತ ಭಾಷೆಯನ್ನಾಗಿ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.
ಕೊಡವ ಸಾಹಿತ್ಯ ಅಕಾಡೆಮಿ, ಕೊಡಗರಳ್ಳಿಯ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವನೆಲೆ ವತಿಯಿಂದ ಕೊಡಗರಹಳ್ಳಿಯಲ್ಲಿ ಭಾನುವಾರ ನಡೆದ `ನಂಗಡ ದೇವನೆಲೆ-ನಂಗಡ ಸಂಸ್ಕೃತಿ~ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತುಳು ಮತ್ತು ಕೊಂಕಣಿ ಭಾಷೆಗಳನ್ನು ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ 3ನೇ ಭಾಷೆಯನ್ನಾಗಿ ಜಾರಿಗೊಳಿಸಿರುವಂತೆ ಕೊಡವ ಭಾಷೆಯನ್ನು ಸಹ ಈ ಪಟ್ಟಿಗೆ ಸೇರ್ಪಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿದರು.
ಜೆಸಿಬಿ ಅಕ್ರಮ ಮಾರಾಟ: ಬಂಧನ
ಹುಬ್ಬಳ್ಳಿ: ಬಾಡಿಗೆಗೆ ನೀಡುವುದಾಗಿ ಪಡೆದ ಜೆಸಿಬಿಯನ್ನು ತನ್ನದೆಂದು ನಂಬಿಸಿ ಮಾರಾಟ ಮಾಡಿದ ವ್ಯಕ್ತಿಯೊಬ್ಬನನ್ನು ಕೇಶ್ವಾಪುರ ಠಾಣೆಯ ಪೊಲೀಸರು ಭಾನುವಾರ ಬಂಧಿಸಿದರು.
ಇಲ್ಲಿಯ ಲಿಂಗರಾಜ ನಗರದ ಶಶಿಧರ ಬಿಳೇಕಲ್ (44) ಬಂಧಿತ ಆರೋಪಿ. ಬಾಡಿಗೆಗೆ ನೀಡುವುದಾಗಿ ಬೆಂಗಳೂರಿನ ಬೈಲನರಸಾಪುರದ ತೌಫೀಕ್‌ವುಲ್ಲಾ ಮತ್ತು ಅನೀಸ್ ಪಾಶಾ ಎಂಬವರಿಂದ ಪಡೆದ ರೂ 20 ಲಕ್ಷ ಮೌಲ್ಯದ ಎರಡು ಜೆಸಿಬಿ ಸ್ವಂತದ್ದೆಂದು ಹೇಳಿಕೊಂಡು ಹಾನಗಲ್ಲ ಮತ್ತು ಬೆಳಗಾವಿಗೆ ಆರೋಪಿ ಶಶಿಧರ ಮಾರಾಟ ಮಾಡಿದ್ದ.ಈ ಅಕ್ರಮದ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಕೇಶ್ವಾಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
`ಐಕಾನ್ ಒನ್~ ಲೋಕಾರ್ಪಣೆ
ಕನಕಪುರ: ಅನವಶ್ಯಕವಾಗಿ ಖರ್ಚಾಗುವ ವಿದ್ಯುತ್ ಉಳಿತಾಯ ಮಾಡುವ ಉಪಕರಣವನ್ನು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಒಬ್ಬ ಸಾಮಾನ್ಯ ವ್ಯಕ್ತಿ ಅಭಿವೃದ್ಧಿಪಡಿಸಿರುವುದು ವಿದ್ಯುತ್ ಉಳಿತಾಯಕ್ಕೆ ಒಂದು ಹೊಸ ಮೈಲಿಗಲ್ಲು ಎಂದು ಐ.ಎ.ಎಸ್.ಅಧಿಕಾರಿ ಗಾಯಿತ್ರಿದೇವಿ ಎ.ಮನೋಲಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಏರ್ಪಡಿಸಿದ್ದ ವಿದ್ಯುತ್ ಉಳಿತಾಯ ಮಾಡುವ `ಇಕಾನ್ ಒನ್~ ಎಂಬ ಉಪಕರಣ ಬಿಡುಗಡೆ ಮಾಡಿ ಮಾತನಾಡಿದರು.
ಚಂದ್ರೇಗೌಡರು ಇಂತಹ ಹೊಸ ಸಾಧನ ಅಭಿವೃದ್ಧಿಪಡಿಸಿರುವುದು ಜಿಲ್ಲೆಗೆ ಹೆಮ್ಮೆಯ ಗರಿ. ಹೊಸ ಉತ್ಪಾದನೆಯನ್ನು ಅವರ ಹುಟ್ಟೂರಿನಲ್ಲಿಯೇ ಬಿಡುಗಡೆಗೊಳಿಸುತ್ತಿರುವುದು ತಮಗೆ ಇನ್ನು ಹೆಚ್ಚಿನ ಸಂತೋಷ ಉಂಟುಮಾಡಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.