ADVERTISEMENT

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಕಲ್ಪ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST

ರಾಮನಗರ : ಜಿಲ್ಲೆಯ ಇತರ ತಾಲ್ಲೂಕುಗಳಂತೆ ರಾಮನಗರವನ್ನೂ ಬರ ಪೀಡಿತ ತಾಲ್ಲೂಕು ಎಂದು ಘೋಷಿಸಲು ಅಗತ್ಯ ಕ್ರಮ; ಕುಡಿಯುವ ನೀರು, ಮೇವು ಸಮಸ್ಯೆ ಇತ್ಯರ್ಥಕ್ಕೆ ಆದ್ಯತೆ; ಪ್ರತಿ ಸೋಮವಾರ ತಾಲ್ಲೂಕು ಮಟ್ಟದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಜನ ಸ್ಪಂದನ; ಸಾಮಾಜಿಕ ಭದ್ರತಾ ಯೋಜನೆಗಳ ರದ್ದಾಗಿರುವ ಫಲಾನುಭವಿಗಳ ಪುನಃ ಪರಿಶೀಲನೆ; ಕಳಪೆ ಕಾಮಗಾರಿಗಳು ನಡೆದರೆ ಅಧಿಕಾರಿಗಳೇ ಹೊಣೆ...

ಇವಿಷ್ಟು ಜಿಲ್ಲೆಯ ನೂತನ ಉಸ್ತುವಾರಿ ಸಚಿವರಾದ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಖಡಕ್ ನುಡಿಗಳು. ಜಿಲ್ಲಾ ಪಂಚಾಯಿತಿ ಭವನದ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಜತೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಚನ್ನಪಟ್ಟಣ, ಕನಕಪುರ, ಮಾಗಡಿ ತಾಲ್ಲೂಕುಗಳಂತೆ ರಾಮನಗರದಲ್ಲಿಯೂ ಬರಗಾಲ ಇದೆ. ಇಲ್ಲಿಯೂ ವಾಡಿಕೆ ಮಳೆಗಿಂತ ಶೇ 50ರಷ್ಟು ಮಳೆಯಾಗಿಲ್ಲ. ಹಾಗಾಗಿ ರಾಮನಗರವನ್ನೂ ಬರ ಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂದು ಶಾಸಕ ಕೆ.ರಾಜು ಅವರು ಸಭೆಯಲ್ಲಿ ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಸಮರ್ಪಕವಾದ ಮಾಹಿತಿಯನ್ನು ಜಿಲ್ಲಾಧಿಕಾರಿಯಿಂದ ಪಡೆದು ನಾಳೆಯೇ ಮುಖ್ಯಮಂತ್ರಿ ಜತೆ ಚರ್ಚಿಸಿ ರಾಮನಗರವನ್ನು ಬರ ಪೀಡಿತ ತಾಲ್ಲೂಕು ಎಂದು ಘೋಷಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಈ ಬಾರಿ ಜಿಲ್ಲೆಯ 582 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಸಮಸ್ಯೆ ಇತ್ಯರ್ಥಕ್ಕೆ 712 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು 2.51 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಕಾಮಗಾರಿಗಳನ್ನು ಪೂರ್ಣಗೊಳಿಸಲು ಅನುದಾನದ ಅವಶ್ಯವಿದ್ದಲ್ಲಿ ಪ್ರಸ್ತಾವನೆ ಸಲ್ಲಿಸಿದರೆ, ಕೂಡಲೇ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಲಾಗುವುದೆಂದು ಸಚಿವರು ತಿಳಿಸಿದರು. ಅಲ್ಲದೆ ಬರಪರಿಹಾರ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ 214 ಕುಡಿಯುವ ನೀರು ಯೋಜನೆಗಳನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಆದ್ದರಿಂದ ಕೂಡಲೇ ಹೊರ ಜಿಲ್ಲೆಗಳಿಂದ ಮೇವು ತರಿಸಿ ವಿತರಿಸಬೇಕು. ಹೊರ ಜಿಲ್ಲೆಗಳಿಂದ ರೈತರೇ ಸ್ವತಃ ಮೇವನ್ನು ತರಿಸಿಕೊಳ್ಳಲು ಮುಂದಾದರೆ ಅವರಿಗೆ ಸಾಗಣೆ ವೆಚ್ಚವನ್ನು ಭರಿಸುವಂತೆ ನಿರ್ದೇಶಿಸಿದರು.

ಜನ ಸ್ಪಂದನ ಸಭೆ: ಜನ ಸಾಮಾನ್ಯರು ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಹಾಗೂ ತುರ್ತಾಗಿ ಅವರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಪ್ರತಿ ಸೋಮವಾರ ಒಂದೊಂದು ತಾಲ್ಲೂಕಿನಲ್ಲಿ ಜನಸ್ಪಂದನಾ ಸಭೆ ನಡೆಸುವಂತೆ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರಿಗೆ ಸಚಿವ ರೇಣುಕಾಚಾರ್ಯ ಸೂಚಿಸಿದರು.

ಕಡುಬಡವರ ನೆರವಿಗಾಗಿ  ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಸರ್ಕಾರ ಜಾರಿಗೆ ತಂದಿರುವ ವಿಧವಾವೇತನ, ಅಂಗವಿಕಲ, ವೃದ್ಧಾಪ್ಯ, ಸಂಧ್ಯಾ ಸುರಕ್ಷಾ ವೇತನ ಸೌಲಭ್ಯಗಳು ಜನರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ಸರಿಯಲ್ಲ. ವಿವಿಧ ಕಾರಣಗಳಿಂದ ಈ ಯೋಜನೆಗಳನ್ನು ರದ್ದುಪಡಿಸಲಾಗಿರುವ ಫಲಾನುಭವಿಗಳನ್ನು ಸಂಪರ್ಕಿಸಿ ಸತ್ಯಾಸತ್ಯತೆ ಅರಿತು ಅರ್ಹರಿಗೆ ಪುನಃ ಯೋಜನೆ ಮಂಜೂರು ಮಾಡುವಂತೆ ಅವರು ತಿಳಿಸಿದರು.
 
ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಬಾರದು. ಒಂದು ವೇಳೆ ಕಳಪೆಯಾದರೆ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.  ಸಣ್ಣ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ಸಭೆಗೆ ಗೈರು ಹಾಜರಾದ್ದರಿಂದ ಅವರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.

ಶಾಸಕರಾದ ಕೆ.ರಾಜು, ಎಚ್.ಸಿ ಬಾಲಕೃಷ್ಣ ಮಾತನಾಡಿ, ರಾಮನಗರ ಜಿಲ್ಲೆಗೆ ಕಳೆದ ನಾಲ್ಕು ವರ್ಷದಲ್ಲಿ ನೀವು 6ನೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದೀರಿ. ನಿಮ್ಮ  ಅವಧಿಯಲ್ಲಾದರೂ ಜಿಲ್ಲೆಯ ಜನರು ಬಹುಕಾಲ ನೆನಪಿಸಿಕೊಳ್ಳುವಂತಹ ಶಾಶ್ವತ ಯೋಜನೆಗಳನ್ನು ಜಾರಿಗೊಳಿಸಲು ಕ್ರಮಕೈಗೊಳ್ಳಿರಿ ಎಂದು ಅವರಿಗೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯು.ಪಿ,ನಾಗೇಶ್ವರಿ, ಉಪಾಧ್ಯಕ್ಷೆ  ಮಾದೇವಿ, ಜಿ.ಪಂ ಸಿಇಒ ಕೆ.ಎಸ್.ವೆಂಕಟೇಶಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.