ಬೀದರ್: ಗುರುನಾನಕರು ಬೀದರ್‌ಗೆ ಭೇಟಿ ನೀಡಿದ 500ನೇ ವರ್ಷಾಚರಣೆ ಪ್ರಯುಕ್ತ ನಗರದ ಗುರುದ್ವಾರದಲ್ಲಿ ಏಪ್ರಿಲ್ 26ರಿಂದ 29 ರವರೆಗೆ ಆಯೋಜಿಸಿರುವ ~ಝೀರಾ ಪ್ರಕಟ ಸಮಾಗಮ~ಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಇನ್ನೊಂದೆಡೆ, ಕಾರ್ಯಕ್ರಮ ನಡೆಯಲಿರುವ ಸ್ಥಳದ ವಿವಾದವು ಇದ್ದು, ಕಾರ್ಯಕ್ರಮ ನಡೆಯಲು ಅವಕಾಶ ನೀಡಬಾರದು ಎಂದು ಆಗ್ರಹಪಡಿಸಿ ಮಾಜಿ ಶಾಸಕ ಸೈಯದ್ ಜುಲ್ಫೇಕರ್, ಬಿರಾದಾರಾ ಸಜ್ಜಾದ ಎ. ನಶೀನ್ ಅವರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಸ್ಥಳದ ವಿವಾದ ಕುರಿತ ಗೊಂದಲ ಇದ್ದರೂ ಇನ್ನೊಂದೆಡೆ ಕಾರ್ಯಕ್ರಮಕ್ಕಾಗಿ ಮುಖ್ಯ ವೇದಿಕೆ, ಬೃಹತ್ ಪೆಂಡಾಲ್ ಸಿದ್ಧಪಡಿಸಲಾಗುತ್ತಿದೆ. ಮುಖ್ಯ ವೇದಿಕೆಯ ಮೇಲೆ ಸ್ವರ್ಣಲೇಪಿತ ಪಾಲಕಿ (ಮಂಟಪ) ನಿರ್ಮಿಸಲಾಗುತ್ತಿದೆ. ಜಲಂಧರ್‌ನ ಸಂತ ಬಾಬಾ ಸುಖದೇವ್ ಸಿಂಗ್ ವೈಯಕ್ತಿಕವಾಗಿ ಇದರ ವೆಚ್ಚ ಭರಿಸಿದ್ದಾರೆ ಎಂದು ಸಂಘಟಕ ಮನ್‌ಪ್ರೀತ್ ಸಿಂಗ್ ಖನೂಜಾ ತಿಳಿಸಿದ್ದಾರೆ.
ಪೆಂಡಾಲ್‌ನಲ್ಲಿ ಸುಮಾರು 5 ಸಾವಿರ ಭಕ್ತರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದ್ದು, ಬೇಸಿಗೆ ಹಿನ್ನೆಲೆಯಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಮತ್ತು ಫ್ಯಾನ್ ಸೌಲಭ್ಯವನ್ನು ಅಳವಡಿಸಲಾಗಿದೆ. ಪ್ರವೇಶದ್ವಾರದ ಬಳಿ ಸುಂದರ ಕಮಾನು ನಿರ್ಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.