ADVERTISEMENT

ಡಿಸಿ ಕಚೇರಿಗೆ ಆಟೋರಿಕ್ಷಾ ಚಾಲಕರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 10:00 IST
Last Updated 25 ಜನವರಿ 2011, 10:00 IST

ದಾವಣಗೆರೆ: ಖಾಸಗಿ ನಗರ ಸಾರಿಗೆ ಬಸ್ ಸಂಚಾರಕ್ಕೆ ಹೊಸದಾಗಿ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಜಿಲ್ಲಾ ಸತ್ಯಶೋಧಕ ಆಟೋರಿಕ್ಷಾ ಚಾಲಕ ಮತ್ತು ಮಾಲೀಕರು ಒಂದು ವಾರದಿಂದ ನಡೆಸುತ್ತಿದ್ದ ಪ್ರತಿಭಟನೆ ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿತು. ನಗರದಲ್ಲಿ ಆಟೋ ಸಂಚಾರವನ್ನು ರದ್ದುಪಡಿಸಿ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಡುಗೆ ಮಾಡುವ ಮೂಲಕ ಪ್ರತಿಭಟನೆಗೆ ಹೊಸ ಸ್ವರೂಪ ನೀಡಿದ ಸಂಘದ ಸದಸ್ಯರು, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಜನಪ್ರತಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಒಂದು ವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ನಡೆಸಿಲ್ಲ. ಹೊಸದಾಗಿ ನೀಡಿರುವ ಬಸ್ ಪರವಾನಗಿ ರದ್ದುಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು. ನಂತರ ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಪ್ರತಿಕೃತಿ ದಹಿಸಿದರು.

ನಾಗರಿಕರ ಅನುಕೂಲಕ್ಕೆ ಗ್ರಾಮಾಂತರ ನಗರ ಸಾರಿಗೆ ಬಸ್‌ಗಳನ್ನು ಬಿಡಲಿ. ಆದರೆ, ನಗರದಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಅನುಮತಿ ನೀಡುವುದು ಬೇಡ. ಖಾಸಗಿ ಬಸ್‌ಗಳಿಗೆ ಅನುಮತಿ ನೀಡುವುದರಿಂದ ತೀವ್ರ ಸ್ಪರ್ಧೆ ಏರ್ಪಟ್ಟು ಆಟೋರಿಕ್ಷಾಗಳನ್ನು ನಂಬಿ ಜೀವನ ನಡೆಸುವವರ ದುಡಿಮೆ ಕ್ಷೀಣಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಖಾಸಗಿ ಬಸ್‌ಗಳ ಸಂಖ್ಯೆ  ಈಗಾಗಲೇ ಹೆಚ್ಚಿದೆ. 

ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು ಹೊಸದಾಗಿ ಬಸ್ ಸಂಚಾರಕ್ಕೆ ಅನುಮತಿ ನೀಡಿದ್ದಾರೆ. ಮತ್ತಷ್ಟು ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಿದರೆ ಸಾವಿರಾರು ಆಟೋರಿಕ್ಷಾ ಮಾಲೀಕರು-ಚಾಲಕರಿಗೆ ಅನ್ಯಾಯವಾಗುತ್ತದೆ. ಅವರನ್ನು ನಂಬಿ ಜೀವನ ಸಾಗಿಸುತ್ತಿರುವ ಕುಟುಂಬಗಳು ಬೀದಿಗೆ ಬರುತ್ತವೆ. ಬ್ಯಾಂಕುಗಳ ಸಾಲದ ಕಂತು ಕಟ್ಟಲು ತೊಂದರೆಯಾಗುತ್ತದೆ ಎಂದು ಧರಣಿ ನಿರತರು ದೂರಿದರು.

ಕೆಲ ಸಮಯ ರಸ್ತೆತಡೆ ನಡೆಸಿದರು. ಪ್ರತಿಭಟನೆಗೆ ಸಹಕಾರ ನೀಡದೇ ಇದ್ದ ಚಾಲಕರನ್ನು ತರಾಟೆಗೆ ತೆಗೆದುಕೊಂಡರು. ಸಂಘದ ಅಧ್ಯಕ್ಷ ಮಹೇಶ್ ಕೋಗಲೂರು, ಪ್ರಧಾನ ಕಾರ್ಯದರ್ಶಿ ಜಿ.ಎಸ್. ನಿಂಗಪ್ಪ, ಮುಖಂಡರಾದ ಶ್ರೀನಿವಾಸ ಮೂರ್ತಿ, ತಿಪ್ಪಾರೆಡ್ಡಿ, ನಾಗರಾಜ್, ಜಿ.ಎಸ್. ಮಂಜಪ್ಪ, ಅಣ್ಣಪ್ಪ, ಹನುಮಂತಪ್ಪ ಮತ್ತಿತರರು  ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.