ADVERTISEMENT

ಡಿ.19ರಂದು ಕಾರ್ಮಿಕರಿಂದ ಜೈಲ್ ಭರೋ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2012, 19:30 IST
Last Updated 11 ನವೆಂಬರ್ 2012, 19:30 IST

ದಾವಣಗೆರೆ: ಬೆಲೆ ಏರಿಕೆ ನಿಯಂತ್ರಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ (ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್) ವತಿಯಿಂದ ನ. 17ರಂದು ಬೆಂಗಳೂರಿನ ಆನಂದರಾವ್ ವೃತ್ತ ಬಳಿಯ ಕೆಇಬಿ ಎಂಜಿನಿಯರ್‌ಗಳ ಸಂಘದ ಸಭಾಭವನದಲ್ಲಿ `ಕಾರ್ಮಿಕ ಸಂಘಟನೆಗಳ ಜಂಟಿ ಸಮಾವೇಶ~ ಹಮ್ಮಿಕೊಳ್ಳಲಾಗಿದೆ.

ಸಮಾವೇಶದಲ್ಲಿ ಒಂದು ಸಾವಿರ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ನಂತರ ಪ್ರತಿ ಜಿಲ್ಲೆಯಲ್ಲಿಯೂ ಸಮಾವೇಶ ನಡೆಸಲಾಗುವುದು ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಚ್.ವಿ. ಅನಂತ ಸುಬ್ಬರಾವ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಪಡಿಸಬೇಕು, ಮಾಸಿಕ ಕನಿಷ್ಠ ವೇತನ ರೂ 10 ಸಾವಿರ ನೀಡಬೇಕು ಎಂದು ಆಗ್ರಹಿಸಿ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ಖಾಸಗೀಕರಣ ಮೊದಲಾದ ಜನವಿರೋಧಿ ನೀತಿಗಳ ವಿರುದ್ಧ 2013ರ ಫೆ. 20 ಮತ್ತು 21ರಂದು `ದೇಶವ್ಯಾಪಿ ಕಾರ್ಮಿಕರ ಐಕ್ಯ ಮುಷ್ಕರ~ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಹಲವು ಹೋರಾಟ ನಡೆಸಲಾಗುತ್ತಿದೆ ಎಂದರು.

ಡಿ. 19ರಂದು `ಜೈಲ್ ಭರೋ~ ಚಳವಳಿ ಹಮ್ಮಿಕೊಂಡಿದ್ದು, ರಾಜ್ಯದಲ್ಲಿ ಕನಿಷ್ಠ 25 ಸಾವಿರ ಮಂದಿ ಬಂಧಿತರಾಗಬೇಕು ಎಂಬ ಗುರಿ ಇದೆ. ಫೆ. 20 ಮತ್ತು 21ರಂದು ಕೈಗಾರಿಕೆಗಳು, ಎಲ್ಲ ಬ್ಯಾಂಕ್, ಸಾರಿಗೆ, ವಿಮಾ ಕಂಪೆನಿಗಳು ಬಂದ್ ಆಗಲಿವೆ. ಈ ಬಗ್ಗೆ ಸರ್ಕಾರಕ್ಕೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
ಕೆಎಸ್‌ಆರ್‌ಟಿಸಿ ನೌಕರರ 41 ಬೇಡಿಕೆ ಈಡೇರಿಕೆ ಬಗ್ಗೆ ಈಗಾಗಲೇ ಚರ್ಚೆ ನಡೆದಿದೆ. ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ನ. 16ರಂದು ಸರ್ಕಾರ ಚರ್ಚೆಗೆ ಆಹ್ವಾನಿಸಿದೆ. ಸಮಾಧಾನಕರ ನಿರ್ಧಾರ ಹೊರಬೀಳದಿದ್ದಲ್ಲಿ ಹೋರಾಟ ಆರಂಭಿಸಲಾಗುವುದು ಎಂದು ಹೇಳಿದರು.

`ಸಿಐಟಿಯು ಹಾಗೂ ಬಿಎಂಎಸ್ ಸಂಘಟನೆಗಳು, ಕೆಎಸ್‌ಆರ್‌ಟಿಸಿ ನೌಕರರಲ್ಲಿ ಗೊಂದಲ ಮೂಡಿಸುವಂತಹ ಹೇಳಿಕೆ ನೀಡುತ್ತಿರುವುದು ಖಂಡನೀಯ. ಸಿಐಟಿಯು ಮುಖಂಡ ವಿ.ಜೆ.ಕೆ. ನಾಯರ್ ಜವಾಬ್ದಾರಿ ಅರಿಯಲಿ~ ಎಂದು ಹೇಳಿದರು.

`ಬೆಂಗಳೂರಿನಲ್ಲಿ ನ. 3ರಂದು ನಡೆದ ಪ್ರತಿಭಟನೆ ವೇಳೆ ಕಾರ್ಮಿಕ ಮುಖಂಡ ಕೇಶವನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಬಗ್ಗೆ ಅಲ್ಲಿದ್ದವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣದ ಹಿಂದೆ ಎಐಟಿಯುಸಿ ಮುಖಂಡರಾಗಲೀ, ನಾನಾಗಲೀ ಇಲ್ಲ~ ಎಂದು ಸ್ಪಷ್ಟನೆ ನೀಡಿದರು.

ಕಾರ್ಯಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ನ. 27ರಿಂದ 30ರವರೆಗೆ ಮುಂಬೈನಲ್ಲಿ ಎಐಟಿಯುಸಿ- ಅಖಿಲ ಭಾರತ ಸಮ್ಮೇಳನ ನಡೆಯಲಿದ್ದು, ರಾಜ್ಯದಿಂದ 188 ಪ್ರತಿನಿಧಿಗಳು ಸೇರಿ, ಒಟ್ಟು 3 ಸಾವಿರ ಮಂದಿ ಭಾಗವಹಿಸುವರು ಎಂದು ತಿಳಿಸಿದರು.

ಕೆಜೆಪಿ ಸಂಯುಕ್ತರಂಗ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜತೆ ಸಿಪಿಐ ಎಂದಿಗೂ ಕೈಜೋಡಿಸುವುದಿಲ್ಲ ಎಂದು ಅನಂತಸುಬ್ಬರಾವ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.