ADVERTISEMENT

ಡೆಂಗೆ, ಚಿಕೂನ್ ಗುನ್ಯ ಅರಿವು ಅವಶ್ಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 19:30 IST
Last Updated 4 ಆಗಸ್ಟ್ 2012, 19:30 IST

ವಿಜಾಪುರ: ಡೆಂಗೆ ಹಾಗೂ ಚಿಕೂನ್ ಗುನ್ಯಾ ಅಪಾಯಕಾರಿ ರೋಗಗಳಾಗಿದ್ದು, ಅವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
 
ಜಿಲ್ಲಾ ಆಡಳಿತ, ನಗರಸಭೆ, ಆರೋಗ್ಯ ಇಲಾಖೆ, ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಇಲ್ಲಿ ಡೆಂಗೆ ಜ್ವರ ಕುರಿತು ಆಯೋಜಿಸಿದ್ದ ಜಾಥಾ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಡೆಂಗೆ ಹಾಗೂ ಚಿಕೂನ್ ಗುನ್ಯ ಬಗ್ಗೆ ಜನರಲ್ಲಿ ಭಯ, ಆತಂಕಗಳಿವೆ. ಸೊಳ್ಳೆಯಿಂದ ಹರಡುವ ಈ ಜ್ವರಗಳ ಬಗ್ಗೆ ಜನರು ವಹಿಸಬೇಕಾದ ಮುಂಜಾಗ್ರತೆ ಕುರಿತು ಅವರಲ್ಲಿ ಅರಿವು ಮೂಡಿಸಿ, ಭಯದಿಂದ ಮುಕ್ತಗೊಳಿಸಬೇಕು ಎಂದರು.

ಡೆಂಗೆ ಇತರ ಮಾರಕ ರೋಗಗಳು ವ್ಯಕ್ತಿಯಲ್ಲಿ ಖಚಿತವಾಗುವವರೆಗೂ ಸಂಶಯಾಸ್ಪದವಾಗಿ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ, ಜನರನ್ನು ಭಯಗೊಳಿಸುವುದು ಬೇಡ. ರೋಗ ಖಚಿತವಾದ ನಂತರವೇ ಈ ಕುರಿತಂತೆ ಮಾಹಿತಿ ನೀಡಿ ಎಂದು ವೈದ್ಯರಿಗೆ ಮನವಿ ಮಾಡಿದರು.

ಬೆಂಗಳೂರಿನ ರಾಜೀವ್ ಗಾಂಧಿ ಮಕ್ಕಳ ವೈದ್ಯಕೀಯ ಸಂಸ್ಥೆಯ ನಿರ್ದೇಶಕ ಡಾ.ಶಿವಾನಂದ, ಡೆಂಗೆ ಹಾಗೂ ಚಿಕೂನ್ ಗುನ್ಯ ಕುರಿತಂತೆ ಉಪನ್ಯಾಸ ನೀಡಿದರು. ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಲ್.ಎಚ್. ಬಿದರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಜಿ.ಪಂ. ಅಧ್ಯಕ್ಷೆ ಸಾವಿತ್ರಿ ಅಂಗಡಿ, ಡೆಂಗೆ ಹಾಗೂ ಚಿಕೂನ್ ಗುನ್ಯ ಕುರಿತ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿದರು.

ಇದಕ್ಕೂ ಮುನ್ನ ನಗರದ ಸಿದ್ಧೇಶ್ವರ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನ, ಜೋರಾಪುರ ಪೇಟೆ, ಪಿಡಿಜೆ ಪ್ರೌಢಶಾಲೆ, ಜುಮ್ಮೋ ಮಸೀದಿ, ಗೋಲಗುಮ್ಮಟದಿಂದ  ಜಾಥಾ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.