ADVERTISEMENT

ತಂತ್ರಜ್ಞಾನ ಕ್ಷೇತ್ರ: ಇನ್ನಷ್ಟು ಸಾಧನೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ರಾಯಚೂರು: ವಿಜ್ಞಾನ ಮತ್ತು ತಂತ್ರಜ್ಞಾನ ಜಗತ್ತಿಗೆ ಅವಶ್ಯಕ. ವಿಜ್ಞಾನವಿಲ್ಲದೆ ಜಗತ್ತು ನಡೆಯುವುದು ಕಷ್ಟ. ಭಾರತದ ಪ್ರಖ್ಯಾತ ವಿಜ್ಞಾನಿಗಳು ಸಂಶೋಧನೆ ಮೂಲಕ ವಿಶ್ವಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದು, ವಿದ್ಯಾರ್ಥಿ ಸಮುದಾಯವು  ವಿಜ್ಞಾನ ವಿಷಯಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ರಾಜ್ಯ ಹಿಂದುದ ವರ್ಗಗಳ ಆಯೋಗದ ಅಧ್ಯಕ್ಷ ಎನ್ ಶಂಕರಪ್ಪ ಹೇಳಿದರು.

ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಸಭಾಭವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಂಯುಕ್ತ ಆಶ್ರಯದಲ್ಲಿ  ಕರ್ನಾಟಕ ವಿಜ್ಞಾನ ವಿದ್ಯಾ ಜಾಗೃತಿ 2011-12 ಅಂಗವಾಗಿ ಆಯೋಜಿಸಿದ್ದ ಪ್ರೌಢ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ `ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ~ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವೂ ಈಗ ಜಗತ್ತಿನಲ್ಲಿ ಮುಂಚೂಣಿಯಲ್ಲಿದೆ. ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಈ ದೇಶ ಮೆರೆಯಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರವು ವಿದ್ಯಾರ್ಥಿ ಸಮುದಾಯದಿಂದಲೇ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಬಗ್ಗೆ ಸೂಕ್ತ ರೀತಿ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಇಂಥ ಕಾರ್ಯಕ್ರಮಗಳ ಮೂಲಕ ಮಾಡುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆವಹಿಸಿದ್ದ ಶಾಸಕ ಸಯ್ಯದ ಯಾಸಿನ್ ಮಾತನಾಡಿ, ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಈ ರೀತಿಯ ಕಾರ್ಯಕ್ರಮ ಆಯೋಜಿಸಿರುವುದು ಪ್ರಶಂಸನೀಯ ಎಂದು ನುಡಿದರು.

ಬೆಂಗಳೂರಿನ ಡಿಎನ್‌ಎ ಕೇಂದ್ರದ ವಿನೋದ ಲಕ್ಕಪ್ಪನ್ ವೇದಿಕೆಯಲ್ಲಿದ್ದರು. ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಪ್ರೊ ಸಿ.ಡಿ ಪಾಟೀಲ್ ಸ್ವಾಗತಿಸಿದರು. ಬಸಪ್ಪ ಗದ್ದಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.