ADVERTISEMENT

ತಲೆ ಮೇಲೆ ಕಾಯಿ ಒಡೆದು ಜಾತ್ರೆ ಆಚರಣೆ

​ಪ್ರಜಾವಾಣಿ ವಾರ್ತೆ
Published 5 ಮೇ 2012, 19:30 IST
Last Updated 5 ಮೇ 2012, 19:30 IST
ತಲೆ ಮೇಲೆ ಕಾಯಿ ಒಡೆದು ಜಾತ್ರೆ ಆಚರಣೆ
ತಲೆ ಮೇಲೆ ಕಾಯಿ ಒಡೆದು ಜಾತ್ರೆ ಆಚರಣೆ   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮಂಚನಬಲೆ ಗ್ರಾಮದಲ್ಲಿ ಶುಕ್ರವಾರ ಮಕ್ಕಳು, ಯುವಕರು ಮತ್ತು ವೃದ್ಧರ ತಲೆಗಳ ಮೇಲೆ ತೆಂಗಿನಕಾಯಿ ಒಡೆಯುವ ಮೂಲಕ ಬೀರೇಶ್ವರ, ಆನೆದೇವರು, ಚೌಡೇಶ್ವರಿ, ಸಿದ್ದೇದೇವರ ದೊಡ್ಡ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ತಲೆ ಮೇಲೆ ತೆಂಗಿನ ಕಾಯಿಗಳನ್ನು ಒಡೆಯುವುದು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು, ಅದನ್ನು ನೋಡಲೆಂದೇ ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ವಿವಿಧ ತಾಲ್ಲೂಕುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

ತಲೆ ಮೇಲೆ ತೆಂಗಿನ ಕಾಯಿಗಳನ್ನು ಒಡೆಸಿಕೊಳ್ಳಲು ವೀರಕುಮಾರರು ಬೆಳಿಗ್ಗೆಯಿಂದಲೇ ಸಿದ್ಧರಾಗಿದ್ದರು. ಕೇಸರಿ ಪಂಚೆ ತೊಟ್ಟಿದ್ದ ವೀರಕುಮಾರರು ತಲೆ ಮೇಲೆ ತೆಂಗಿನಕಾಯಿ ಒಡೆಸಿಕೊಳ್ಳುವ ಮುನ್ನ ಕತ್ತಿಗಳನ್ನು ಹಿಡಿದು ಕೊಳವೊಂದರಲ್ಲಿ ಜಲಪೂಜೆ ಮಾಡಿದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮೈದಾನದಲ್ಲಿ ವೃತ್ತಾಕಾರದಲ್ಲಿ ಕೂತ ಅವರ ತಲೆ ಮೇಲೆ ಒಂದೊಂದಾಗಿ ತೆಂಗಿನಕಾಯಿ ಒಡೆಯಲಾಯಿತು. ಒಬ್ಬರ ತಲೆ ಮೇಲೆ ಹತ್ತಕ್ಕೂ ಹೆಚ್ಚು ತೆಂಗಿನಕಾಯಿ ಒಡೆಯಲಾಯಿತು.

`ಏಳು ವರ್ಷಕ್ಕೊಮ್ಮೆ ಈ ಜಾತ್ರೆನಡೆಯುತ್ತದೆ. ತಲೆ ಮೇಲೆ ತೆಂಗಿನಕಾಯಿ ಒಡೆಸಿಕೊಳ್ಳುವುದರಿಂದ ಮತ್ತು ಒಡೆದ ತೆಂಗಿನಕಾಯಿಯನ್ನು ಮನೆಗೆ ಒಯ್ಯುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ಅದಕ್ಕೆ ಒಡೆದ ಕಾಯಿಗಳನ್ನು ಪಡೆದುಕೊಳ್ಳಲು ಜನರು ಮುಗಿಬೀಳುತ್ತಾರೆ. ವೀರಕುಮಾರರಿಗೆ ತಲೆ ಮೇಲೆ ಹೆಚ್ಚು ಗಾಯಗಳಾಗುವುದಿಲ್ಲ. ತೆಂಗಿನಕಾಯಿ ಒಡೆದ ಕೂಡಲೇ ಅವರ ತಲೆ ಮೇಲೆ ಅರಿಶಿಣದ ಪುಡಿ ಸವರಲಾಗುತ್ತದೆ. ಈ ರೀತಿ ಆಚರಣೆಯನ್ನು ಶತಮಾನಗಳಿಂದ ಪಾಲಿಸಿಕೊಂಡು ಬರುತ್ತಿದ್ದೇವೆ~ ಎಂದು ಬೀರೇಶ್ವರ, ಆನೆದೇವರು, ಚೌಡೇಶ್ವರಿ, ಸಿದ್ದೇದೇವರು ಸೇವಾ ಮಂಡಳಿ ಮುಖಂಡ ಬೀರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.