ADVERTISEMENT

ತಾ.ಪಂ. ಮಾಜಿ ಸದಸ್ಯ ಚಿನ್ನ ಚೋರ !

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 19:30 IST
Last Updated 11 ಸೆಪ್ಟೆಂಬರ್ 2011, 19:30 IST

ಕೃಷ್ಣರಾಜಪೇಟೆ: ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯನನ್ನು ಪಟ್ಟಣದಲ್ಲಿ ಪೊಲೀಸರು ಭಾನುವಾರ ಬಂಧಿಸಿ, ಈತನಿಂದ 1.20 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಊಪನಹಳ್ಳಿಯ ಅಜ್ಜೇಗೌಡ ಆಲಿಯಾಸ್ ರಿವಾಲ್ವಾರ್ ರಾಜ ಬಂಧಿತ. ಈತ ಕೆಲ ದಿನಗಳ ಹಿಂದೆ ಪಟ್ಟಣದ ಲಕ್ಷ್ಮಿನಾರಾಯಣಸ್ವಾಮಿ ದೇಗುಲ ಸಮೀಪ ತಾಲ್ಲೂಕು ಕಚೇರಿ ಸಿಬ್ಬಂದಿ ಮಂಜುಳಾ ಅವರ ಮನೆಯಿಂದ ಲಕ್ಷಾಂತರ ಮೌಲ್ಯದ ಒಡವೆ ದೋಚಿ  ಪರಾರಿಯಾಗಿದ್ದ.
 
ಪ್ರಕರಣ ಭೇದಿಸಿದ ಪೊಲೀಸರು ಬಂಧಿತನಿಂದ ಮಾಹಿತಿಯನ್ನು ಆಧರಿಸಿ ಚನ್ನರಾಯಪಟ್ಟಣದ ಗಿರವಿ ಅಂಗಡಿಯಲ್ಲಿದ್ದ ಚಿನ್ನಾಭರಣ, ಕೈಯಲ್ಲಿದ್ದ  ಉಂಗುರಗಳನ್ನು ವಶಪಡಿಸಿಕೊಂಡಿದ್ದಾರೆ.

ಅವಕ್ಕಾದ ಪೊಲೀಸರು: ರಿವಾಲ್ವಾರ್ ರಾಜನ ವೃತ್ತಾಂತವನ್ನು ತಿಳಿದು ಪೊಲೀಸರೇ ಅವಕ್ಕಾಗಿದ್ದಾರೆ. ಈತ ಈ ಹಿಂದೆ ವಿವಿಧ ರಾಜಕೀಯ ಪಕ್ಷಗಳ ಮುಖಂಡನಾಗಿ  ಗುರುತಿಸಿಕೊಂಡಿದ್ದ. ತಾಲ್ಲೂಕು ಪಂಚಾಯಿತಿ, ಎಪಿಎಂಸಿ ಹಾಗೂ ಆಶ್ರಯ ಸಮಿತಿಯ ಮಾಜಿ ಸದಸ್ಯನೂ ಹೌದು. ಸಮಾಜದ ಗಣ್ಯ ವ್ಯಕ್ತಿಯ ಸೋಗಿನಲ್ಲಿ ಕಳವು ಮಾಡಿದ್ದಾನೆ. ಕಳ್ಳತನವನ್ನು ಕಸುಬು ಮಾಡಿಕೊಂಡಿರುವ ಈತ 10ಕ್ಕೂ ಹೆಚ್ಚು ಬಾರಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.