ADVERTISEMENT

ತೆಂಕಮಿಜಾರು: ಪಾಳುಬಿದ್ದ ರೈತ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST

ತೆಂಕಮಿಜಾರು (ಮೂಡುಬಿದಿರೆ): ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತೆಕಟ್ಟೆ ಎಂಬಲ್ಲಿ ಮಂಗಳೂರು ಎಪಿಎಂಸಿ ವತಿಯಿಂದ ನಿರ್ಮಿಸಲಾದ ರೈತ ಮಾರುಕಟ್ಟೆಯನ್ನು ರೈತರು ಬಳಕೆ ಮಾಡುತ್ತಿಲ್ಲ. ಪರಿಣಾಮ ಮಾರುಕಟ್ಟೆ ಉತ್ತಮ ಸ್ಥಿತಿಯಲ್ಲಿದ್ದೂ ಪಾಳುಬೀಳುವಂತಾಗಿದೆ.

ಸಣ್ಣ ರೈತರು ಬೆಳೆದ ತರಕಾರಿ ಮತ್ತಿತರ ಫಸಲನ್ನು ಮಧ್ಯವರ್ತಿಗಳ ಕಾಟವಿಲ್ಲದೆ ಗ್ರಾಹಕರಿಗೇ ನೇರವಾಗಿ ಮಾರಾಟ ಮಾಡುವಂತಾಗಲಿ ಎಂಬ ಉದ್ದೇಶದಿಂದ ಸರ್ಕಾರದ ಆರ್‌ಬಿಡಿಎಫ್ ಯೋಜನೆಯಡಿ ಮಂಗಳೂರು ಎಪಿಎಂಸಿ ವತಿಯಿಂದ 10 ಲಕ್ಷ ವೆಚ್ಚದಲ್ಲಿ 4 ವರ್ಷಗಳ ಹಿಂದೆಯೇ ಈ ಕಟ್ಟಡ ನಿರ್ಮಾಣವಾಗಿತ್ತು. 2006ರಲ್ಲಿ ಆಗಿನ ಕೃಷಿ ಸಚಿವ ಶರಣಬಸಪ್ಪ ದರ್ಶನಾಪುರ ರೈತ ಮಾರುಕಟ್ಟೆಗೆ ಶಿಲಾನ್ಯಾಸ ನೆರವೇರಿಸಿದ್ದರು.

ಈ ಕಾರ್ಯಕ್ರಮಕ್ಕೆ ಮೂಡುಬಿದಿರೆ ಶಾಸಕರಾದ ತಮ್ಮನ್ನು ಆಹ್ವಾನಿಸದೇ ಕಡೆಗಣಿಸಲಾಗಿದೆ ಎಂದು ಅಭಯಚಂದ್ರ ಜೈನ್ ಅಂದು ಸಚಿವರ ಎದುರೇ ಅಸಮಾಧಾನ ತೋಡಿಕೊಂಡಿದ್ದರು. 2007ರಲ್ಲಿ ಈ ಕಟ್ಟಡವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಉದ್ಘಾಟಿಸಿದ್ದರು.

ಅಂದಿನಿಂದ ಈ ಕಟ್ಟಡ ರೈತರ ಉಪಯೋಗಕ್ಕೆ ಮುಕ್ತವಾಗಿದೆ. ಆದರೂ ರೈತರು ಮಾತ್ರ ಕೃಷಿ ಉತ್ಪನ್ನಗಳನ್ನು ಇಲ್ಲಿ ತಂದು ಮಾರಾಟ ಮಾಡದೇ ಇರುವ ಕಾರಣ ಮಾರುಕಟ್ಟೆ ಕಟ್ಟಡ ಪಾಳುಬಿದ್ದಿದೆ. ಸುತ್ತಲೂ ಪೊದೆಗಳು ಬೆಳೆದಿವೆ. ಕಟ್ಟಡದೊಳಗೆ ಈಗ ತ್ಯಾಜ್ಯದ ರಾಶಿ ತುಂಬಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.