ADVERTISEMENT

ದ.ಕ: ಮಳೆಗೆ ಮತ್ತೊಂದು ಬಲಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 19:30 IST
Last Updated 14 ಜೂನ್ 2011, 19:30 IST

ಮಂಗಳೂರು: ಮುಂಗಾರು ಮಳೆ ಆರ್ಭಟಕ್ಕೆ ಜಿಲ್ಲೆಯಲ್ಲಿ ಮಂಗಳವಾರ ಮತ್ತೊಂದು ಜೀವ ಬಲಿಯಾಗಿದ್ದು, ಮಂಗಳೂರು ತಾಲ್ಲೂಕಿನಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ. ಪುತ್ತೂರು ತಾಲ್ಲೂಕಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿಯೊಬ್ಬರ ಶವ ಮಂಗಳವಾರ ಪತ್ತೆಯಾಗಿದೆ. 

ಉಡುಪಿ ಜಿಲ್ಲೆಯಲ್ಲಿ ಒಂದು ವಾರದ ಬಳಿಕ ಮುಂಗಾರು ಮಳೆ ಲಯ ಕಂಡುಕೊಂಡಿದೆ. ಬೆಳಿಗ್ಗೆಯಿಂದಲೇ ದಟ್ಟ ಮೋಡಕವಿದ ವಾತಾವರಣವಿದ್ದು ಧಾರಾಕಾರ ಮಳೆಯಾಯಿತು. ಆದರೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಪುತ್ತೂರು ವರದಿ: ಎರಡು ದಿನಗಳ ಹಿಂದೆ ಹೊಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ತಾಲ್ಲೂಕಿನ ಪಡುವನ್ನೂರು ಗ್ರಾಮದ ಅಂಬಟಮೂಲೆ ನಿವಾಸಿ ಈಶ್ವರ್ ನಾಯ್ಕ ಪುತ್ರ ರಮಾನಂದ ನಾಯ್ಕ (26) ಅವರ ಶವ ಮಂಗಳವಾರ ಬೆಳಿಗ್ಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರಿಗೆ ಮೀನು ಹಿಡಿಯುವ ಹಾಗೂ ಹೊಳೆಯಲ್ಲಿ ನೀರು ಹೆಚ್ಚಿದಾಗ ತೆಂಗಿನಕಾಯಿ ಹಿಡಿಯುವ ಹವ್ಯಾಸ ಇತ್ತು. ಈ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಳೆದ ಕೆಲವು ದಿನಗಳಿಗಿಂತ ಹೆಚ್ಚಾಗಿದೆ.

ADVERTISEMENT

ಚಿಕ್ಕಮಗಳೂರು ವರದಿ: ಜಿಲ್ಲೆಯ ತಾಲ್ಲೂಕುಗಳಲ್ಲೂ ಮಂಗಳವಾರ ಧಾರಾಕಾರ ಮಳೆಯಾಗಿದೆ. ಶೃಂಗೇರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ತುಂಗಾ ನದಿ ಅಪಾಯ ಮಟ್ಟದತ್ತ ಸಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.