ADVERTISEMENT

ದಲಿತರ ಮನೆಗಳಲ್ಲಿ ಸಹಪಂಕ್ತಿ ಭೋಜನ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 18:55 IST
Last Updated 15 ಸೆಪ್ಟೆಂಬರ್ 2011, 18:55 IST

ಮೈಸೂರು: ಹಿಂದೂ ಧರ್ಮದಲ್ಲಿ ಕೋಮು ಸೌಹಾರ್ದ ಮೂಡಿಸುವ ಉದ್ದೇಶದಿಂದ ಕಳೆದ ವರ್ಷ ಹಮ್ಮಿಕೊಂಡಿದ್ದ `ಸಾಮರಸ್ಯ ಪಾದಯಾತ್ರೆ~ ಸವಿನೆನಪಿಗಾಗಿ ಗುರುವಾರ ಗಾಂಧಿನಗರದಲ್ಲಿ `ಸಹಪಂಕ್ತಿ ಭೋಜನ~ ಕಾರ್ಯಕ್ರಮ ನಡೆಯಿತು.

ಮಾದಿಗ ಜನಾಂಗದವರೇ ಹೆಚ್ಚು ವಾಸಿಸುವ ಗಾಂಧಿನಗರದ 8, 9, 10ನೇ ಮುಖ್ಯರಸ್ತೆಯಲ್ಲಿ ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಸಾಮರಸ್ಯ ವೇದಿಕೆಯು ಸುಮಾರು 15 ಮಾದಿಗರ ಮನೆಗಳಲ್ಲಿ ಭೋಜನದ ವ್ಯವಸ್ಥೆ ಮಾಡಿತ್ತು.

ಭೋಜನಕ್ಕೆ ತರಕಾರಿ ಬಾತ್,  ಮೊಸರನ್ನ, ವಡೆಯನ್ನು ಬಡಿಸಲಾಯಿತು. ಸಹಪಂಕ್ತಿ ಭೋಜನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್, ಪಾಲಿಕೆ  ಸದಸ್ಯ ಎಂ.ಕೆ.ಶಂಕರ್, ಸಾಮರಸ್ಯ ವೇದಿಕೆ ರಾಜ್ಯ ಸಂಚಾಲಕ ವಾದಿರಾಜ್, ಜಿಲ್ಲಾ ಸಂಚಾಲಕರಾದ ಡಾ.ಎಸ್.ಇ.ಮಹದೇವಪ್ಪ, ಅ.ಮ.ಭಾಸ್ಕರ್, ಡಾ.ಪಿ.ವಿ.ನಂಜರಾಜ ಅರಸ್, ಕವಯತ್ರಿ ಡಾ.ಲತಾ ರಾಜಶೇಖರ್, ಮೇಯರ್ ಪುಷ್ಪಲತಾ ಟಿ.ಬಿ. ಚಿಕ್ಕಣ್ಣ ಭಾಗವಹಿಸಿದ್ದರು.

ಹಬ್ಬದ ಸಂಭ್ರಮ: ಗಾಂಧಿನಗರದ 10ನೇ ಮುಖ್ಯರಸ್ತೆಯಲ್ಲಿ ಹಬ್ಬದ ಸಂಭ್ರಮವಿತ್ತು. ಮನೆ ಮುಂದೆ ಸಗಣಿ ನೀರು ಹಾಕಿ, ಬಣ್ಣ ಬಣ್ಣದ ರಂಗೋಲಿಯಿಂದ ರಸ್ತೆಯನ್ನು ಅಲಂಕರಿಸಲಾಗಿತ್ತು. ಬೀದಿಯುದ್ದಕ್ಕೂ ತಳಿರು ತೋರಣ, ಬಾಳೆ ಗಿಡಗಳನ್ನು ಕಟ್ಟಲಾಗಿತ್ತು. ಶಾಲಾ ಮಕ್ಕಳು ಸೀರೆ ಉಟ್ಟುಕೊಂಡು ಕಳಸ ಹೊತ್ತು ಅತಿಥಿಗಳನ್ನು ಸ್ವಾಗತಿಸಿದರು. ಮಾದಾರ ಚೆನ್ನಯ್ಯ ಸ್ವಾಮೀಜಿ `ಸಾಮರಸ್ಯ ದೀಪ~ ಬೆಳಗುವ ಮೂಲಕ  ಪಾದಯಾತ್ರೆ ಆರಂಭಿಸಿದರು.

ಕಳೆದ ಸೆ. 15ರಂದು ಕೃಷ್ಣಮೂರ್ತಿಪುರಂನಲ್ಲಿ ನಡೆದ `ಸಾಮರಸ್ಯ ಪಾದಯಾತ್ರೆ~ಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿ ಹಾಗೂ ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಭಾಗವಹಿಸಿದ್ದರು. ಹೀಗಾಗಿ ಸವರ್ಣೀಯರು ದಲಿತರ ಮನೆಗಳಲ್ಲಿ ಭೋಜನ ಸವಿಯುವ ಮೂಲಕ ಸಾಮರಸ್ಯಕ್ಕೆ ನಾಂದಿ ಹಾಡಿದರು.

ಸಹಪಂಕ್ತಿ ಭೋಜನ ಸ್ವೀಕರಿಸಿದ ಬಳಿಕ ಮಾತನಾಡಿದ ಮಾದಾರ ಸ್ವಾಮೀಜಿ, `ಹಿಂದೂ ಧರ್ಮದಲ್ಲಿನ ಮತೀಯ ಕಲ್ಪನೆಗಳನ್ನು ತೊಡೆದು ಹಾಕಲು ಸಾಮರಸ್ಯ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಆದರೆ, ಇದರಿಂದಲೇ ಜಾತಿ ವಿನಾಶ ಸಾಧ್ಯ ಎಂಬ ಭ್ರಮೆ ನಮಗಿಲ್ಲ~ ಎಂದು ಹೇಳಿದರು.

`ಪೇಜಾವರ ಶ್ರೀಗಳ ಪ್ರೇರಣೆಯಿಂದ ಪಾದಯಾತ್ರೆ ಆರಂಭಿಸಲಾಗಿದೆ. ನಮ್ಮ ಮನೆಗಳಿಗೆ ಅವರು ಮತ್ತು ಅವರ ಮನೆಗಳಿಗೆ ನಾವು ಹೋಗುವ ಮೂಲಕ ಸಾಮರಸ್ಯ ಮೂಡಿಸುವ ಕೆಲಸ ನಡೆದಿದೆ. ಹಿಂದೂ ಧರ್ಮದಲ್ಲಿ ಜಾತಿ ಭಾವನೆಗಳಿಗೆ ತೆರೆ ಎಳೆಯಬೇಕು ಎಂಬುದು ನಮ್ಮ ಉದ್ದೇಶ. ಆದರೆ, ಪಾದಯಾತ್ರೆಯಿಂದ ಜಾತಿ ಭೇದ ಮರೆಯಾಗುತ್ತದೆ ಎಂಬ ಭ್ರಮೆಯೂ ಇಲ್ಲ. ಆದರೆ, ಸಮಾಜದ ಜನರಲ್ಲಿ ಸಾಮರಸ್ಯ ಮೂಡಿಸಲು ಸಾಧ್ಯ ಎಂಬ ನಂಬಿಕೆ ಇದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.