ADVERTISEMENT

ದೇಶಭಾಷೆಗಳ ಅಳಿವು-ಉಳಿವಿಗೆ ಸಂಕಟ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2011, 19:30 IST
Last Updated 2 ಅಕ್ಟೋಬರ್ 2011, 19:30 IST
ದೇಶಭಾಷೆಗಳ ಅಳಿವು-ಉಳಿವಿಗೆ ಸಂಕಟ
ದೇಶಭಾಷೆಗಳ ಅಳಿವು-ಉಳಿವಿಗೆ ಸಂಕಟ   

ಶಿವಮೊಗ್ಗ: ಇಂಗ್ಲಿಷ್ ಮುಖ್ಯವಾಗುತ್ತಿರುವುದರಿಂದ ದೇಶಭಾಷೆಗಳ ಅಳಿವು-ಉಳಿವಿನ ಸಂಕಟ ಈಗ ಆರಂಭವಾಗಿದೆ. ಕನ್ನಡ ಭಾಷೆ ಉಳಿಸಿಕೊಳ್ಳುವ ಪ್ರಯತ್ನಗಳ ಶೋಧನೆಯಾಗಬೇಕೆಂದು ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಭಾನುವಾರ ಹೇಳಿದರು.

ಶಿವಮೊಗ್ಗ ಜಿಲ್ಲೆ ಸಾಗರದ ಹೆಗ್ಗೋಡಿನ ನೀನಾಸಂ ಏಳು ದಿನಗಳ ಕಾಲ ಹಮ್ಮಿಕೊಂಡಿರುವ ಸಂಸ್ಕೃತಿ ಶಿಬಿರಕ್ಕೆ ಚಾಲನೆ ನೀಡಿ `ದೇಶಭಾಷೆಗಳು~ ಕುರಿತು ಅವರು ಮಾತನಾಡಿದರು.

 ಇಂಗ್ಲಿಷ್ ಅನಿವಾರ್ಯ; ಅದು ಇದ್ದೇ ಇರುತ್ತದೆ. ಆದರೆ ಅದು ಭಾವನೆಗಳ ಭಾಷೆ ಆಗುವುದಿಲ್ಲ. ಹಾಗಾಗಿ ಆತ್ಮೀಯ, ಆತ್ಮದ ಭಾಷೆ ಕನ್ನಡವನ್ನು ಉಳಿಸಿಕೊಳ್ಳಬೇಕಾಗಿದೆ. ಇಂದು ಚಾರಿತ್ರಿಕವಾದ ಸ್ಥಿತಿಯಲ್ಲಿ ನಾವಿದ್ದೇವೆ. ಇದು ಯಾವಾಗಲೂ ಬದಲಾಗುತ್ತಿರುತ್ತದೆ.
 
ದೇಶಭಾಷೆ ಕಡೆಗೇ ನಾವು ಬದಲಾವಣೆ ಆಗಬೇಕಾದರೆ ನಾವು ನಮ್ಮ ರುಚಿಗಳನ್ನು ಧನಾತ್ಮಕವಾಗಿ ಬಳಸಿಕೊಳ್ಳಬೇಕು. ಪ್ರೊ.ನಂಜುಂಡಸ್ವಾಮಿ ಅವರ ಕೆಂಟಕಿ ಚಿಕನ್ ವಿರುದ್ಧದ ಹೋರಾಟವು ದೇಶಭಾಷೆಯನ್ನು ಉಳಿಸುವ ಒಂದು ಯತ್ನವಾಗಿತ್ತು ಎಂದು ಅರ್ಥೈಸಿದರು.

12ನೇ ಶತಮಾನದಲ್ಲಿ ಇಂಗ್ಲಿಷ್ ಕಾಡುಭಾಷೆಯಾಗಿತ್ತು.ಆಗ ಇಂಗ್ಲೆಂಡ್‌ಗೆ ಮಾತ್ರ ಸೀಮಿತವಾಗಿದ್ದ ಈ ಭಾಷೆ, ಈಗ ಮಾರುಕಟ್ಟೆ ಭಾಷೆಯಾಗಿ ಬೆಳೆದಿದೆ. ಭಾಷೆ ಎನ್ನುವುದು ಮಾರುಕಟ್ಟೆ ಮೂಲಕವೇ ಬರುತ್ತದೆ. ಅದು ಬೇಡ ಎಂದರೆ ನಾವು ಬೇರೆ ಪರ‌್ಯಾಯಗಳನ್ನು ಶೋಧಿಸಬೇಕಾಗುತ್ತದೆ.

ಅದಕ್ಕಾಗಿ ಗಾಂಧೀಜಿ `ದೇಸಿ~ ಕಲ್ಪನೆ ಹುಟ್ಟುಹಾಕಿದರು. ಆದರೆ ಟ್ಯಾಗೋರ್ ಹೊರ ಪ್ರಪಂಚಕ್ಕೆ ಒಡ್ಡಿಕೊಳ್ಳಬೇಕಾದ್ದು  ಅನಿವಾರ್ಯ ಎಂದು ಭಾವಿಸಿದ್ದರು. ಗಾಂಧೀಜಿ-ಟ್ಯಾಗೋರ್ ಇಬ್ಬರ ಕಲ್ಪನೆಗಳು ಸರಿ ಎಂದು ನಮಗೆ ಈಗ ಅನ್ನಿಸಿದರೆ ನಾವೆಲ್ಲ ಉತ್ತಮ ಆಲೋಚನಾ ಸ್ಥಿತಿಯಲ್ಲಿದ್ದೇವೆ ಎಂದೇ ಅರ್ಥ ಎಂದು ವಿಶ್ಲೇಷಿಸಿದರು.

ಇಂಗ್ಲೆಂಡಿನಲ್ಲಿ ಈಗ ಪ್ರಸ್ತುತವಲ್ಲದ ಇಂಗ್ಲಿಷ್ ಭಾಷೆ ಕನ್ನಡ ದಲ್ಲಿ ಪ್ರಸ್ತುತವಾಗಿದೆ ಎಂದ ಅವರು, ಹಲವು ನೆನಪುಗಳನ್ನು ಕನ್ನಡ ಭಾಷೆ ಉಳಿಸಿಕೊಂಡಿದೆ. ಹಾಗೆಯೇ, ಎಲ್ಲಾ ಕಾಲಗಳೂ ನಮ್ಮಲ್ಲಿ ಉಳಿದಿರುವುದೇ ದೇಶಭಾಷೆಗಳ ಉಳಿವಿಗಿರುವ ಸಹಾಯಕ ಅಂಶ ಎಂದರು.

ಕನ್ನಡದಲ್ಲಿ ಚಂದ್ರಶೇಖರ ಕಂಬಾರರು, ದೇವನೂರು ಮಹದೇವ ಉಪಭಾಷೆಯಲ್ಲಿ ಬರೆದಿದ್ದಾರೆ. ಆತ್ಮೀಯತೆಯೇ ಜೀವಾಳವಾಗಿರುವ ಸಾಹಿತ್ಯದಲ್ಲಿ ಆತ್ಮೀಯ ಭಾಷೆ ಬಳಕೆಯಾಗುತ್ತದೆ. ಆದರೆ, ಬಹಿರ್ಮುಖತೆಯೇ ಮುಖ್ಯವಾದಾಗ ಎಲ್ಲರಿಗೂ ಬೇಕಾದ ರಾಜಮಾರ್ಗದ ಕನ್ನಡ ಬೇಕಾಗುತ್ತದೆ ಎಂದರು.

  ಆತ್ಮೀಯತೆ ಬೇಕು ಎನಿಸುವಷ್ಟು ಕಾಲ ದೇಸಿ ಭಾಷೆಗಳು ಬೇಕಾಗುತ್ತವೆ ಎಂದ ಅವರು, ಪರಮಹಂಸರು ಬಂಗಾಳಿ ಭಾಷೆಯನ್ನು ಬಹಳ ಉತ್ಕಟವಾಗಿ ಬಳಸುತ್ತಿದ್ದರು; ಅವರದ್ದು ಬೀದಿಭಾಷೆಯಾಗಿತ್ತು. ಟ್ಯಾಗೋರ್‌ಕ್ಕಿಂತ ಅವರು ಅನ್ಯೋನ್ಯವಾಗಿ ಬಂಗಾಳಿ ಮಾತನಾಡುತ್ತಿದ್ದರು ಎಂದು ವಿವರಿಸಿದರು.

ದೇಶಭಾಷೆ ಉಳಿಯಬೇಕು ಎಂದಾಗ ಜಾತಿಪದ್ಧತಿ ಉಳಿಯಬೇಕಾಗುತ್ತದೆ. ಆದರೆ, ಜಾತಿಪದ್ಧತಿ ಕೆಡುಕು ಎಂದರೆ ಅದನ್ನು ಖಂಡಿಸಬೇಕಾಗುತ್ತದೆ. ಅದಕ್ಕೆ ಸಂಸ್ಕೃತ ಹಾಗೂ ಇಂಗ್ಲಿಷ್ ಬೇಕಾಗುತ್ತದೆ ಎಂದು ನುಡಿದರು.

ಗೋಕಾಕ ಚಳವಳಿ ಬಗ್ಗೆ ಹಿಂದೆ ವಿರೋಧ ವ್ಯಕ್ತಪಡಿಸಿದ್ದ ನಿಲುವಿಗೆ ಈಗಲೂ ಬದ್ಧನಾಗಿದ್ದು, ಕನ್ನಡ ಮಾಧ್ಯಮ ಶಿಕ್ಷಣ ಮೂಲಕ ಕನ್ನಡವೊಂದನ್ನೇ ಬೋಧಿಸಲು ಹೊರಡುವುದು ಸರಿಯಲ್ಲ. ಎಲ್ಲರಿಗೂ ಅವರವರ ಭಾಷೆ ಉಳಿಸಿಕೊಳ್ಳಬೇಕೆಂಬ ಹಂಬಲ ಇರುತ್ತದೆ. ಆತ್ಮೀಯತೆ ಉಳಿಯಬೇಕಾದರೆ ಅವರವರ ಮಾತೃಭಾಷೆ ಉಳಿಯಬೇಕು. ಕನ್ನಡದವರಿಗೆ ಇಂಗ್ಲಿಷ್ ಕೊಟ್ಟು, ತಮಿಳಿನವರಿಗೆ ಕನ್ನಡ ಕಲಿಯಬೇಕು ಎಂದರೆ ಹೇಗೆ? ಎಂದು ಅವರು ಪ್ರಶ್ನಿಸಿದರು.

ಸಂವಾದದಲ್ಲಿ ವಿಮರ್ಶಕರಾದ ಪ್ರೊ.ಗಿರಡ್ಡಿ ಗೋವಿಂದರಾಜ್, ಟಿ.ಪಿ. ಅಶೋಕ ಮತ್ತಿತರರು ಪಾಲ್ಗೊಂಡಿದ್ದರು. ರಂಗಕರ್ಮಿ ಕೆ.ವಿ. ಅಕ್ಷರ ಸ್ವಾಗತಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.