ADVERTISEMENT

ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರಂತೆ ಪರಿಗಣಿಸಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ಹನುಮಸಾಗರ: ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರು ವಿಶೇಷ ಶಿಕ್ಷಕರು ಎಂಬ ಪದನಾಮ ಹೊಂದಿರುವ ಕಾರಣವಾಗಿಯೇ ಉಳಿದೆಲ್ಲ ಶಿಕ್ಷಕರಿಗೆ ದೊರೆಯುವಂತಹ ಸೌಲಭ್ಯಗಳು ದೊರಕುತ್ತಿಲ್ಲ. ಅವರಿಗೆ ಸೌಕರ್ಯ ಕೊಡುವಂತಾಗಬೇಕು ಎಂದು ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ವಿ.ವೆಂಕಟೇಶ ಹೇಳಿದರು.

ಗುರುವಾರ ಇಲ್ಲಿನ ಬಾಲಕಿಯರ ಪ್ರೌಢ ಶಾಲಾ ಆವರಣದಲ್ಲಿ ನಡೆದ ದೈಹಿಕ ಶಿಕ್ಷಣ ಶಿಕ್ಷಕರ 5ನೇ ಜಿಲ್ಲಾ ಶೈಕ್ಷಣಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು. ದೈಹಿಕ ಶಿಕ್ಷಕರನ್ನು ವಿಶೇಷ ಶಿಕ್ಷಕ ಎಂದು ಪರಿಗಣಿಸಲಾಗುತ್ತಿದೆ. ಈ ಪದನಾಮವನ್ನು ತೆಗೆದು ಹಾಕಿ ದೈಹಿಕ ಶಿಕ್ಷಣದ ಸಹ ಶಿಕ್ಷಕರು ಎಂದು ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.

1967ರಿಂದ ಇಲ್ಲಿಯವರೆಗೆ ದೈಹಿಕ ಶಿಕ್ಷಕರನ್ನು ವೃಂದ ಮತ್ತು ನೇಮಕಾತಿಯಲ್ಲಿ ವಿಶೇಷ ಶಿಕ್ಷಕರೆಂದು ಪರಿಗಣಿಸಲಾಗಿದೆ. ಸೇವಾ ಜೇಷ್ಠತೆಯಲ್ಲಿ ನಮಗಿಂತ ಕಿರಿಯರಿಗೆ ಬಡ್ತಿ ನೀಡಲಾಗುತ್ತಿದೆ ಎಂದು ಅವರು ನುಡಿದರು. ಉಳಿದೆಲ್ಲ ವಿಷಯಗಳಂತೆ 6ನೇ ತರಗತಿಯಿಂದ 10ನೇ ತರಗತಿವರೆಗೆ ದೈಹಿಕ ಶಿಕ್ಷಣವೂ ಒಂದು ಪಠ್ಯವಾಗಿರುವಾಗ ಮುಖ್ಯೋಪಾಧ್ಯಾಯರ ಹುದ್ದೆಗೆ ನಮಗೆ ಬಡ್ತಿ ನೀಡದೇ ಇರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ರಾಜ್ಯ ಸಂಘದ ಕಾರ್ಯದರ್ಶಿ ಅಶ್ವಥ್ ನಾರಾಯಣ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲಕ್ಷ್ಮೀದೇವಿ ಹಳ್ಳೂರ, ವಿದ್ಯಾಶ್ರೀ ಗಜೇಂದ್ರಗಡ, ಹನಮಕ್ಕ ಚೌಡ್ಕಿ ಮತ್ತಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.