ADVERTISEMENT

ದ್ರಾಕ್ಷಿ-ಬಾಳೆ: ಮಳೆಗೆ ತತ್ತರ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 13:58 IST
Last Updated 17 ಏಪ್ರಿಲ್ 2013, 13:58 IST

ವಿಜಯಪುರ: ಪಟ್ಟಣ ಮತ್ತು ಸುತ್ತಮುತ್ತ ಸೋಮವಾರ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಸುರಿದ ಆಲಿಕಲ್ಲು ಮಳೆಗೆ ದ್ರಾಕ್ಷಿ, ಬಾಳೆ ಮತ್ತು ಹಿಪ್ಪು ನೇರಳೆ ಸೊಪ್ಪು ಬೆಳೆಗೆ ಹಾನಿ ಉಂಟಾಗಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಫಸಲು ನಷ್ಟವಾಗಿದೆ ಎಂದು ರೈತರು ಅಲವತ್ತುಕೊಂಡಿದ್ದಾರೆ. ಎ.ರಂಗನಾಥಪುರ ಗ್ರಾಮದ ರೈತ ಶಿವಕುಮಾರ್ ಅವರ 3 ಎಕರೆ ದ್ರಾಕ್ಷಿ ತೋಟ ಬಿರುಮಳೆಗೆ ಸಂಪೂರ್ಣ ನೆಲ ಕಚ್ಚಿದ್ದು, ನಷ್ಟವನ್ನು ಅಂದಾಜು ಮಾಡಲೂ ಸಾಧ್ಯ ಇಲ್ಲದಂತಾಗಿದೆ ಎಂದಿದ್ದಾರೆ.

`ಫಸಲಿಗೆ ಬಂದಿದ್ದ ದ್ರಾಕ್ಷಿಯನ್ನು ಇನ್ನು 2-3 ದಿನಗಳಲ್ಲಿ ಮಾರಾಟ ಮಾಡಬೇಕಿದ್ದ ಸಂದರ್ಭದಲ್ಲೇ 4 ವರ್ಷಗಳ ಶ್ರಮ ಮೆಳೆಯಲ್ಲಿ ಸಂಪೂರ್ಣ ನೆಲ ಕಚ್ಚಿದೆ. ಈಗಾಗಲೇ ಬ್ಯಾಂಕ್ ಮತ್ತುಇತರೆಡೆ ಸಾಲ ಮಾಡಿ ಬೆಳೆ ನಿರೀಕ್ಷಿಸುತ್ತಿದ್ದ ನಮಗೆ ಈ ಹಾನಿಯಿಂದ ಹೊರಬರಲು ದಿಕ್ಕು ತೋಚದಾಗಿದೆ' ಎಂದು ಅವರು ತಮ್ಮ ದುಃಖ ತೋಡಿಕೊಂಡಿದ್ದಾರೆ.

ಸರ್ವೇ ನಂ.5ರಲ್ಲಿ ಎರಡೂವರೆ ಎಕರೆ ಬಾಳೆ ಬೆಳೆದಿದ್ದ ರೈತ ಹರೀಶ್ ಕೂಡಾ ತಮ್ಮ ತೋಟದ ಸುಮಾರು 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಾಳೆ ಮಳೆಯಿಂದ ಹಾನಿಗೊಳಗಾಗಿದೆ ಎಂದರು. `ತೋಟದಲ್ಲಿ 27ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ತೋಡಿಸಿದ್ದೆವು. ಅವುಗಳಲ್ಲಿ ಒಂದು ಮಾತ್ರ ಸಫಲಗೊಂಡಿತ್ತು. ಆದರೆ ಈಗ ಕೈಗೆ ಬಂದ ಬೆಳೆ ನಷ್ಟವಾಗಿದೆ' ಎಂದರು.

ಶಾಶ್ವತ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಕಲ್ಯಾಣ್ ಕುಮಾರ್ ಮಾತನಾಡಿ, `ಈ ಭಾಗದಲ್ಲಿ ಶಾಶ್ವತ ನೀರಾವರಿ ಕಲ್ಪಿಸುವವರೆಗೆ ವಿಫಲವಾದ ಕೊಳವೆ ಬಾವಿಗಳಿಗೆ ರೈತನಿಗೆ ಆಗುತ್ತಿರುವ ನಷ್ಟದ ಹಣವನ್ನು ಸರ್ಕಾರ ಭರಿಸಲಿ' ಎಂದು ಒತ್ತಾಯಿಸಿದರು.

ಸುಮಾರು 12 ಎಕರೆ ಜಮೀನು ಹೊಂದಿರುವ ಗ್ರಾಮದ ರೈತ ನಾರಾಯಣಪ್ಪ ಮಾತನಾಡಿ, ತಾವು ಇದುವರೆಗೂ 29 ಕೊಳವೆ ಬಾವಿ ಕೊರೆಯಿಸಿದ್ದು, 2 ಕೊಳವೆ ಬಾವಿಗಳಲ್ಲಿ ಅತಿ ಕಡಿಮೆ ಪ್ರಮಾಣದ ನೀರು ದೊರೆತಿದೆ. ಇದು ಸಾಲದಾದಾಗ ಬೆಳೆಗಳಿಗೆ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತೇವೆ. ಹಾಕಿದ ಹಿಪ್ಪುನೇರಳೆ ಮತ್ತಿತರೆ ಬೆಳೆಗಳು ಹಾನಿಗೊಳಗಾಗಿದ್ದು, ಮೊದಲೇ ಸಾಲದ ಶೂಲದಲ್ಲಿರುವ ರೈತರು ಇಂತಹ ನಷ್ಟಗಳಿಂದ ಹೇಗೆ ಸುಧಾರಿಸಿಕೊಳ್ಳಬೇಕು? ನಮಗಾದ ನಷ್ಟಕ್ಕೆ ಸರ್ಕಾರ ಪರಿಹಾರ ನೀಡುವುದೇ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.