ADVERTISEMENT

ಧರ್ಮಕೀರ್ತಿ ಸ್ವಾಮೀಜಿ ಹೊಂಬುಜ ಮಠ ಪೀಠಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST

ಚನ್ನರಾಯಪಟ್ಟಣ: ಶಿವಮೊಗ್ಗ ಜಿಲ್ಲೆ ಹೊಂಬುಜ ಜೈನ ಕ್ಷೇತ್ರದ ನೂತನ ಪೀಠಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರವಣಬೆಳಗೊಳದ ಧರ್ಮಕೀರ್ತಿ ಸ್ವಾಮೀಜಿ ಅವರ ಪಟ್ಟಾಭಿಷೇಕ ಮಹೋತ್ಸವ ನ.14 ರಿಂದ 17ರ ವರೆಗೆ ಹೊಂಬುಜ ಜೈನ ಕ್ಷೇತ್ರದಲ್ಲಿ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ನೆರವೇರಲಿದೆ.

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸೋಮವಾರ ಶ್ರವಣಬೆಳಗೊಳದಲ್ಲಿ ಏರ್ಪಡಿಸಿದ್ದ ಧಾರ್ಮಿಕ  ಸಮಾರಂಭದಲ್ಲಿ ಹೊಂಬುಜ ಮಠದ ಪರಂಪರೆಯ ಸಂಘಮಿ ಕುಟುಂಬದ ಹಿರಿಯರಾದ ವಸಂತ ಹೊಂಬಣ್ಣ ಅವರು ಈ ವಿಷಯ ತಿಳಿಸಿದರು.

ನೂತನ ಪೀಠಾಧ್ಯಕ್ಷರಾಗಿ ಆಯ್ಕೆಯಾಗಿರುವ ಧರ್ಮಕೀರ್ತಿ ಸ್ವಾಮೀಜಿ ಅವರಿಗೆ ತಿಲಕವಿರಿಸಿ ಸ್ವಾಗತಿಸಿ, ಆಯ್ಕೆಯ ಅಧಿಕೃತ ನಿರ್ಣಯ ಪತ್ರವನ್ನು ಈ ಸಂದರ್ಭದಲ್ಲಿ ಸಮರ್ಪಿಸಲಾಯಿತು.

ಹೊಂಬುಜ ಮಠದ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಹೆಗ್ಗಡೆ ಮಾತನಾಡಿ, ನೂತನ ಪೀಠಾಧ್ಯಕ್ಷರು ಶ್ರವಣಬೆಳಗೊಳದಿಂದ ಹೊರಟು ನ.14 ರಂದು ಹೊಂಬುಜ ಕ್ಷೇತ್ರಕ್ಕೆ ಪುರ ಪ್ರವೇಶ ಮಾಡಲಿದ್ದಾರೆ. ನ. 17ರಂದು ಪಟ್ಟಾಭಿಷೇಕ ಮಹೋತ್ಸವವು ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯ ಸಾನ್ನಿಧ್ಯದಲ್ಲಿ ನೆರವೇರಲಿದೆ ಎಂದು ಹೇಳಿದರು.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಯಾವುದೇ  ಕಾರ್ಯದ ಯಶಸ್ಸಿಗೆ ಅದರ ನಿರ್ವಹಣೆ ಮುಖ್ಯ. ಉತ್ತಮ ವ್ಯಕ್ತಿಗಳಿಂದ ಉತ್ತಮ  ಕಾರ್ಯಗಳಾಗಲಿವೆ ಎಂದು ನುಡಿದರು.

ನೂತನ ಪೀಠಾಧ್ಯಕ್ಷರಾಗಿ ಆಯ್ಕೆಯಾಗಿರುವ ಧರ್ಮಕೀರ್ತಿ ಸ್ವಾಮೀಜಿ ಮಾತನಾಡಿ, ಹೊಂಬುಜ ಕ್ಷೇತ್ರದ ಬೆಳವಣಿಗೆ ಎಲ್ಲರ ಸಹಕಾರ ಅಗತ್ಯ. ತಮ್ಮನ್ನು ಒಮ್ಮತದಿಂದ ಆಯ್ಕೆ ಮಾಡಿದ್ದು ಸಂತಸ ತಂದಿದೆ ಎಂದು ಹೇಳಿದರು.

ಕರ್ನಾಟಕ ಜೈನ ಸಂಘದ ಅಧ್ಯಕ್ಷ ಜೀತೇಂದ್ರಕುಮಾರ್ ಸ್ವಾಗತಿಸಿದರು. ಹೊಂಬುಜ ಕ್ಷೇತ್ರದ ದೇವೇಂದ್ರಕೀರ್ತಿ ಕಾಲವಾದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಈ ಆಯ್ಕೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT