ADVERTISEMENT

ಧಾರ್ಮಿಕ ದತ್ತಿ ಕಾಯ್ದೆ: ಜೈನ ಸಂಸ್ಥೆಗಳ ಸೇರ್ಪಡೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 17:05 IST
Last Updated 20 ಫೆಬ್ರುವರಿ 2011, 17:05 IST

ಹುಬ್ಬಳ್ಳಿ: ಕರ್ನಾಟಕ ಧಾರ್ಮಿಕ ದತ್ತಿ ಕಾಯ್ದೆಯಡಿ ಜೈನ ಧಾರ್ಮಿಕ ಸಂಸ್ಥೆಗಳನ್ನು ತರಲು ರಾಜ್ಯ ಸರ್ಕಾರ ಮುಂದಾದ ಕ್ರಮಕ್ಕೆ ವರೂರು ನವಗ್ರಹ ತೀರ್ಥದ ಗುಣಧರನಂದಿ ಮಹಾರಾಜರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ವಿಷಯವಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಜೈನ ಸಂಸ್ಥೆಗಳನ್ನು ಧಾರ್ಮಿಕ ದತ್ತಿ ಕಾಯ್ದೆ ಅಡಿಯಲ್ಲಿ ತರುವುದನ್ನು ವಿರೋಧಿಸಿ ಸೋಮವಾರ (ಫೆ.21) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಜರಾಯಿ ಸಚಿವ ವಿ.ಎಸ್. ಆಚಾರ್ಯ ಅವರಿಗೆ ಅಖಿಲ ಭಾರತ ಜೈನ ಸಮಾಜ ಮತ್ತು ಕರ್ನಾಟಕ ಜೈನ ಸಂಸ್ಥೆ ಸಂಘಟನೆಗಳ ಪರವಾಗಿ ಮನವಿ ಅರ್ಪಿಸಲಾಗುವುದು’ ಎಂದು ತಿಳಿಸಿದ್ದಾರೆ.

‘ಜೈನ ಧರ್ಮ ಅತಿ ಪ್ರಾಚೀನವಾಗಿದ್ದು, ಇದಕ್ಕೆ ಪುರಾತನ ಮಂದಿರಗಳು, ಶಿಲ್ಪಕಲೆಗಳು, ಶಾಸನಗಳು, ಹಸ್ತಪ್ರತಿಗಳು ಹಾಗೂ ಧರ್ಮಗ್ರಂಥಗಳ ಆಧಾರವಿದೆ. ಧರ್ಮವನ್ನು ಪಾಲನೆ ಮಾಡುವ ಕೋಟ್ಯಂತರ ಜನ ಶಾಂತಿ, ಅಹಿಂಸೆ, ಸಂಯಮದಿಂದ ಬದುಕಿದ್ದಾರೆ. ಜೈನ ಧರ್ಮಕ್ಕೂ, ಹಿಂದೂ ಧರ್ಮಕ್ಕೂ ಸಾಕಷ್ಟು ವ್ಯತ್ಯಾಸವಿದೆ.ಜೈನ ಧರ್ಮವು ಹಿಂದೂ ಧರ್ಮದ ಅಧೀನ ಎನ್ನಲು ಯಾವುದೇ ಆಧಾರಗಳಿಲ್ಲ’ ಎಂದು ಹೇಳಿದ್ದಾರೆ.

‘ಜೈನ ಧರ್ಮ ಕರ್ಮ ಸಿದ್ಧಾಂತದ ಮೇಲೆ ವಿಶ್ವಾಸವಿಟ್ಟರೆ, ಹಿಂದೂ ಧರ್ಮ ಈಶ್ವರವಾದಿಯಾಗಿದೆ. ಜೈನ ಧರ್ಮದಲ್ಲಿ ವೇದಪಠಣ ಮಾಡುವುದಿಲ್ಲ, ಹಿಂದೂ ಧರ್ಮದಲ್ಲಿ ವೇದ ಪಠಣವಿದೆ. ಎರಡೂ ಧರ್ಮಗಳ ಪೂಜಾ ಕ್ರಮಗಳು, ಉತ್ಸವ ಪದ್ಧತಿಗಳು ಬೇರೆ-ಬೇರೆಯಾಗಿವೆ’ ಎಂದು ವ್ಯತ್ಯಾಸಗಳನ್ನು ಅವರು ಪಟ್ಟಿ ಮಾಡಿದ್ದಾರೆ.‘ರಾಜ್ಯ ಸರ್ಕಾರ ಜೈನರ ಮನವಿಗೆ ಸ್ಪಂದಿಸದಿದ್ದರೆ ಜೈನಮುನಿಗಳು, ಭಟ್ಟಾರಕರು ಹಾಗೂ ಸಾವಿರಾರು ಜನ ಶ್ರಾವಕರ ಜೊತೆ ವಿಧಾನಸೌಧದ ಮುಂದೆ ಅಹಿಂಸಾ ಸತ್ಯಾಗ್ರಹವನ್ನು ನಡೆಸಲಾಗುವುದು. ನಂತರದ ಬೆಳವಣಿಗೆಗಳಿಗೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ’ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.