ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಕ್ರಾಸ್ ಬಳಿ ಹದಗೆಟ್ಟಿರುವ ಸರ್ವೀಸ್ ರಸ್ತೆಗಳನ್ನು ದುರಸ್ತಿಪಡಿಸಬೇಕು ಮತ್ತು ಸಂಚಾರಕ್ಕೆ ಸಂಬಂಧಿಸಿದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರು ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಒತ್ತಾಯಿಸಿದರು.
ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಧನ ಒದಗಿಸುವ ಸಂಬಂಧ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಂಡ ನಂತರ ನಂದಿ ಕ್ರಾಸ್ ಸಮೀಪದ ಸರ್ವೀಸ್ ರಸ್ತೆಗಳ ಸ್ಥಿತಿಗತಿಗಳ ಪರಿಶೀಲನೆಗೆ ಮುಂದಾದ ಪ್ರಾಧಿಕಾರದ ಯೋಜನಾಧಿಕಾರಿ ಗುಪ್ತಾ ಅವರಿಗೆ ರೈತರು ಆಗ್ರಹಿಸಿದರು.
`ಮಳೆಯಿಂದ ಸರ್ವೀಸ್ ರಸ್ತೆಗಳು ಹಾಳಾಗಿ ಹಲವು ತಿಂಗಳಾಗಿದ್ದು, ಈವರೆಗೆ ದುರಸ್ತಿ ಮಾಡಿಲ್ಲ. ಭಾರಿ ಮಳೆಯಾದರೆ, ಇನ್ನಷ್ಟು ಸಮಸ್ಯೆ ಉಂಟಾಗಲಿದೆ. ಅಸಮರ್ಪಕವಾಗಿ ಕಾಮಗಾರಿ ಮಾಡಲಾಗಿರುವುದರಿಂದ ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಸರ್ವೀಸ್ ರಸ್ತೆಗಳ ದುರಸ್ತಿಗೆ ಪ್ರಾಧಿಕಾರದ ವತಿಯಿಂದ ಶೀಘ್ರವೇ ಕ್ರಮ ಕೈಗೊಳ್ಳಬೇಕು~ ಎಂದು ರೈತರು ಒತ್ತಾಯಿಸಿದರು. ಉಪವಿಭಾಗಾಧಿಕಾರಿ ಸತೀಶ್‌ಕುಮಾರ್, ರೈತ ಮುಖಂಡರಾದ ಯಲುವಹಳ್ಳಿ ಸೊಣ್ಣೇಗೌಡ, ಬಿ.ಎನ್. ಮುನಿಕೃಷ್ಣಪ್ಪ ಮತ್ತಿತರರು ಜತೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.