ADVERTISEMENT

ನಕ್ಸಲರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಎಂ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST

ಕಳಸ: ರಾಜ್ಯದಲ್ಲಿ ಭಯೋತ್ಪಾದನೆಯಲ್ಲಿ ತೊಡಗಿರುವ ಮಾವೋವಾದಿ ನಕ್ಸಲರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಪರ ಚುನಾವಣಾ ಪ್ರಚಾರಕ್ಕೆ ಕಳಸಕ್ಕೆ ಆಗಮಿಸಿದ್ದ ಅವರು ದುರ್ಗಾ ಮಂಟಪದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ರಾಜ್ಯದ ಮಲೆನಾಡಿನಲ್ಲಿ ಕಂಡುಬಂದಿರುವ ನಕ್ಸಲ್ ಚಟುವಟಿಕೆ ಹತ್ತಿಕ್ಕಲು ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನಕ್ಸಲರ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ಮೂಲಸೌಕರ್ಯ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಸದಾನಂದ ಗೌಡ ಹೇಳಿದರು. ಪ್ರಜ್ಞಾವಂತ ಯುವಕರು ರಾಜ ಕೀಯಕ್ಕೆ ಬಂದು ಈ ಕ್ಷೇತ್ರದಲ್ಲಿ ಬದಲಾವಣೆ ಮಾಡಬೇಕು ಎಂದರು. ಎಳನೀರು-ಬೆಳ್ತಂಗಡಿ ರಸ್ತೆ ಬಗ್ಗೆ ಅರಣ್ಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇನೆ.

ಆದರೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕರೆ ಮಾತ್ರ ಕಾಮಗಾರಿ ಸಾಧ್ಯ. ಡೀಮ್ಡ ಫಾರೆಸ್ಟ್ ರದ್ದು ಮಾಡಲು ಕೇಂದ್ರಕ್ಕೆ ಮಾತ್ರ ಅಧಿಕಾರ ಇದೆ. ರಾಜ್ಯದ ರೈತರ ಸಂಕಷ್ಟ ನಿವಾರಣೆಗೆ ಶೇ.1 ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ. ಭೂಚೇತನ, ಸುವರ್ಣ ಭೂಮಿ ಯೋಜನೆ ಮೂಲಕ ಕೃಷಿಕರಲ್ಲಿ ವಿಶ್ವಾಸ ಮೂಡಿಸಲಾಗುತ್ತಿದೆ.

ಕಾಫಿ ಬೆಳೆಗಾರರ ಸಾಲ ಮನ್ನಾಗೆ ಹಣ ಒದಗಿಸಲಾಗಿದೆ. ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾದಂತಹ ಯೋಜನೆಗಳು ಬಡವರ ಆಶಾಕಿರಣ ಎಂದು ಹೇಳಿದರು.ಶಾಸಕ ಕುಮಾರಸ್ವಾಮಿ ಮಾತನಾಡಿ, ಕಳಸಕ್ಕೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದರು.

ಗೃಹ ಸಚಿವ ಆರ್.ಅಶೋಕ್ ಮಾತನಾಡಿ, ಈ ಚುನಾವಣೆಯಲ್ಲಿ ಬೇರೆ ಪಕ್ಷದ ಅಭ್ಯರ್ಥಿ ಗೆದ್ದಲ್ಲಿ ಅಭಿವೃದ್ಧಿಗೆ ಹಿನ್ನಡೆ ಆಗುತ್ತದೆ. ಆದ್ದರಿಂದ ಸುನೀಲ್ ಕುಮಾರ್ ಅವರನ್ನು ಗೆಲ್ಲಿಸಬೇಕು ಎಂದರು. ಮುಖಂಡರಾದ ಪ್ರಾಣೇಶ್, ಜಯಂತ್, ಕೇಶವ, ಗಿರೀಶ್, ಶೇಷಗಿರಿ, ರಾಜೇಂದ್ರ, ಶ್ರೇಯಾಂಸ್ ಕುಮಾರ್, ನಂದೀಶ್, ಬೋಜೇಗೌಡ, ಶಿವು, ವೆಂಕಟಸುಬ್ಬಯ್ಯ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.