ADVERTISEMENT

ನಕ್ಸಲೀಯರ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:30 IST
Last Updated 8 ಜನವರಿ 2012, 19:30 IST

ತೀರ್ಥಹಳ್ಳಿ: ಆಗುಂಬೆ ಸಮೀಪ ಮಲ್ಲಂದೂರಿನ ಬರ್ಕಣ ಫಾಲ್ಸ್‌ನಲ್ಲಿ ಶುಕ್ರವಾರ ನಕ್ಸಲೀಯರು ಹಾಗೂ ಪೊಲೀಸರ ನಡುವೆ ಸಂಭವಿಸಿದ ಗುಂಡಿನ ಚಕಮಕಿಗೆ ಸಂಬಂಧಿಸಿದಂತೆ ನಕ್ಸಲೀಯರ ವಿರುದ್ಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಕಾಯ್ದೆ ಅಡಿಯಲ್ಲಿ ನಕ್ಸಲ್ ಗುಂಪಿನ ನಾಯಕರಾದ ವಿಕ್ರಮ್‌ಗೌಡ, ಬಿ.ಜಿ. ಕೃಷ್ಣಮೂರ್ತಿ, ಮುಂಡಗಾರು ಲತಾ, ಮಹೇಶ್, ಶ್ರೀಮತಿ, ಶೋಭಾ ಸೇರಿದಂತೆ ಆರು ಮಂದಿ ನಕ್ಸಲೀಯರು ಹಾಗೂ ಇತರೆ ಮೂವರು ಅಪರಿಚಿತರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಆಗುಂಬೆ ಪೊಲೀಸರು ತಿಳಿಸಿದ್ದಾರೆ.

ಬರ್ಕಣದಲ್ಲಿ ಘಟನೆ ನಡೆದ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಲಾಗಿದೆ.
ಕಾರ್ಕಳದ ಸದಾಶಿವಗೌಡ ಹತ್ಯೆ ನಂತರ ಮೊದಲ ಬಾರಿಗೆ ಪಶ್ಚಿಮ ಘಟ್ಟದ ದುರ್ಗಮ ಅರಣ್ಯ ಪ್ರದೇಶವಾದ ಆಗುಂಬೆಯ ಬರ್ಕಣ ಫಾಲ್ಸ್ ಬಳಿಯಲ್ಲಿ ನಕ್ಸಲ್ ನಿಗ್ರಹ ದಳದ ಪೊಲೀಸರಿಗೆ ಶುಕ್ರವಾರ ನಕ್ಸಲರು ಎದುರಾಗಿದ್ದರಲ್ಲದೆ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು.

ADVERTISEMENT

ಬರ್ಕಣದಲ್ಲಿ ನಡೆದ ಗುಂಡಿನ ಚಕಮಕಿಯ ಬಳಿಕ ಆಗುಂಬೆ ಭಾಗದ ಮಾರ್ಗವಾಗಿ ಸಂಚರಿಸುವ ವಾಹನಗಳು ಸೇರಿದಂತೆ ಆಯಕಟ್ಟಿನ ಪ್ರದೇಶದಲ್ಲಿ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ತಲಾ ಒಬ್ಬರು ಇನ್‌ಸ್ಪೆಕ್ಟರ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಅವರನ್ನು ಒಳಗೊಂಡ 12 ಮಂದಿ ಪೊಲೀಸ್ ಸಿಬ್ಬಂದಿಯ ನಾಲ್ಕು ತಂಡಗಳು ಆಗುಂಬೆ ಭಾಗದ ಕಾಡಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.