ADVERTISEMENT

ನಗರಗಳಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಶೋಭಾ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ವಿಜಾಪುರ: `ವಿಜಾಪುರ ಸೇರಿದಂತೆ ಯಾವುದೇ ನಗರದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. ಪರೀಕ್ಷೆ ಸಮಯವಾಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ನಿರಂತರವಾಗಿ ಸಿಂಗಲ್ ಫೇಸ್ ವಿದ್ಯುತ್  ಪೂರೈಸಲು ಸೂಚಿಸಲಾಗಿದೆ~ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ತಾಲ್ಲೂಕಿನ ಬಬಲೇಶ್ವರದಲ್ಲಿ ನಿರ್ಮಿಸಿರುವ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಇದರ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ನಿತ್ಯ 6 ಗಂಟೆಗಳ ಕಾಲ ಮೂರು ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ರಾಜ್ಯದಲ್ಲಿ ಈಗ ನಿತ್ಯ 1,000 ಮೆ.ವಾ ವಿದ್ಯುತ್ ಕೊರತೆ ಇದೆ.

ಪೂರೈಕೆಯಾಗುತ್ತಿರುವ ವಿದ್ಯುತ್‌ನಲ್ಲಿ ಸುಮಾರು 2,000 ಮೆ.ವಾನಷ್ಟು ಹಾನಿಯಾಗುತ್ತಿದೆ. ರಾಜ್ಯದಲ್ಲಿಯೇ ಹೆಸ್ಕಾಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು (ಶೇ 24) ಹಾನಿ ಇದೆ. ವಿದ್ಯುತ್ ವಿತರಣಾ ಕೇಂದ್ರಗಳು ಹಾಗೂ ಲೈನ್‌ಗಳ ಕೊರತೆ  ಇದಕ್ಕೆ ಕಾರಣ ಎಂದರು.

ಕೂಡಗಿಯ ವಿದ್ಯುತ್ ಸ್ಥಾವರಕ್ಕೆ ಎನ್‌ಟಿಪಿಸಿ ಟೆಂಡರ್ ಕರೆದ ತಕ್ಷಣ ಅಡಿಗಲ್ಲು ನೆರವೇರಿಸಲಾಗುವುದು. ಅಲ್ಲಿ ಉತ್ಪಾದನೆಯಾಗುವ ವಿದ್ಯುತ್‌ಬಳಸಲಿಕ್ಕಾಗಿ ವಿತರಣಾ ಜಾಲ ನಿರ್ಮಿಸಲು ರೂ1000 ಕೋಟಿ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಗುಲ್ಬರ್ಗ, ಬೆಳಗಾವಿ, ಮಂಗಳೂರು, ಬೆಂಗಳೂರು ವಿಭಾಗದಲ್ಲಿ 3 ಮೆ.ವಾ ಸೋಲಾರ್ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಆರಂಭಿಸಲಾಗುವುದು ಎಂದರು.
 
ರಾಜ್ಯದ ಇತಿಹಾಸದಲ್ಲಿ ಕಳೆದ ಮೂರು ದಿನಗಳಲ್ಲಿ  8,606 ಮೆ.ವಾ ವಿದ್ಯುತ್ ಪೂರೈಸಿರುವುದು ದಾಖಲೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.