ADVERTISEMENT

ನಗರಸಭೆ ದಾಳಿ: ಪ್ಲಾಸ್ಟಿಕ್ ಚೀಲ ವಶ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ಹಾಸನ: ನಗರದ ವಿವಿಧ ಅಂಗಡಿಗಳಿಗೆ ಶನಿವಾರ ದಾಳಿ ನಡೆಸಿದ ನಗರಸಭೆಯ ಅಧಿಕಾರಿಗಳು ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ 40 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಚೀಲಗಳು ಹಾಗೂ ಇತರ ಉತ್ಪನ್ನಗಳನ್ನು ವಶಪಡಿಸಿಕೊಂಡರು.

ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಕಸ್ತೂರಬಾ ರಸ್ತೆ, ದೊಡ್ಡಗರಡಿ ಬೀದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಎಲ್ಲ ಪ್ಲಾಸ್ಟಿಕ್ ಉತ್ಪನ್ನಗಳನ್ನು ಪರಿಶೀಲಿಸಿದರು.
 
ಬಹುತೇಕ ಎಲ್ಲ ಅಂಗಡಿಗಳಲ್ಲೂ ನಿಷೇಧಿತ ಪ್ಲಾಸ್ಟಿಕ್  ಮಾರಾಟ ಮಾಡುತ್ತಿರುವುದು ಪತ್ತೆಯಾಯಿತು. ಅವೆಲ್ಲವುಗಳನ್ನೂ ವಶಕ್ಕೆ ತೆಗೆದುಕೊಂಡ ಅಧಿಕಾರಿಗಳು ಕಾರಿನಲ್ಲಿ ತುಂಬಿ ನಗರಸಭೆಗೆ ಸಾಗಿಸಿದರು.

ಹಾಸನದಲ್ಲಿ ಇಂಥ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೂ ಮಾರಾಟ ಹಾಗೂ ಬಳಕೆಯನ್ನು ಮುಂದುವರಿಸಿದ ವ್ಯಾಪಾರಿಗಳನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡು, `ಇದು ಕೊನೆಯ ಎಚ್ಚರಿಕೆ ಮುಂದೆಯೂ ಇಂಥ ವಸ್ತುಗಳನ್ನು ಮಾರಾಟ ಮಾಡಿದರೆ ಅಂಗಡಿಯ ಪರವಾನಗಿ ರದ್ದು ಮಾಡಬೇಕಾಗುತ್ತದೆ~ ಎಂಬ ಎಚ್ಚರಿಕೆಯನ್ನು ನೀಡಿದರು. ಎಲ್ಲ ಅಂಗಡಿಗಳಿಂದ ಸೇರಿ ಸುಮಾರು 100 ಕೆ.ಜಿ. ಪ್ಲಾಸ್ಟಿಕ್ ಉತ್ಪನ್ನಗಳನ್ನು ಅಧಿಕಾರಿಗಳು ಶನಿವಾರ ವಶಪಡಿಸಿಕೊಂಡಿದ್ದಾರೆ. 

ನಗರಸಭೆಯವರು ಈ ಹಿಂದೆಯೂ ಹಲವು ಬಾರಿ ದಾಳಿ ನಡೆಸಿದ್ದರೂ, ನಗರದಲ್ಲಿ ಇಂಥ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟ ಅವ್ಯಾಹತವಾಗಿ ನಡೆಯುತ್ತಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಆಯುಕ್ತ ನಾಗಭೂಷಣ ಅವರ ಸೂಚನೆಯಂತೆ ಆರೋಗ್ಯಾಧಿಕಾರಿ ಸ್ಟೀವನ್ ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.