ADVERTISEMENT

ನಾಯಕನಹಟ್ಟಿ: ಕೃಷಿ ಮೇಳ ಆರಂಭ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 19:30 IST
Last Updated 9 ಮಾರ್ಚ್ 2012, 19:30 IST

ನಾಯಕನಹಟ್ಟಿ: ರೈತರಿಗೆ ದುಡಿಮೆಗೆ ತಕ್ಕ ಬೆಲೆ ಸಿಗುತ್ತಿಲ್ಲ. ಬೆಳೆ ಬೆಳೆಯಲು ಸರಿಯಾದ ವಿದ್ಯುತ್ ಇಲ್ಲ. ಇದರಿಂದಾಗಿ ಪ್ರಸ್ತುತ ರೈತರು ಸಂಕಷ್ಟದ ಸ್ಥಿತಿ ಎದುರಿಸುವಂತಾಗಿದೆ ಎಂದು ಬಬ್ಬೂರು ತೋಟಗಾರಿಕಾ ಕೇಂದ್ರದ ಡೀನ್ ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.

ನಾಯಕನಹಟ್ಟಿ ಜಾತ್ರೆ ಅಂಗವಾಗಿ ಇಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ವಿಶ್ವ ವಿದ್ಯಾಲಯ, ಕೃಷಿ ತಂತ್ರಜ್ಞಾನ ಸಂಸ್ಥೆ, ವಿಂಡ್ ಮೀಡಿಯಾ ಲ್ಯಾಬ್ಸ್ ವತಿಯಿಂದ ಹಮ್ಮಿಕೊಂಡಿರುವ ಕೃಷಿ ಮೇಳ- 2012ರಲ್ಲಿ ಅವರು ಮಾತನಾಡಿದರು.

ರೈತರು ಇಂತಹ ಮೇಳಗಳಲ್ಲಿ ಭಾಗವಹಿಸಿ ಮಾಹಿತಿ ಪಡೆಯಬೇಕು. ಆಧುನಿಕ ಕೃಷಿ ಉಪಕರಣಗಳನ್ನು ಬಳಸಿ ಕೃಷಿಯಲ್ಲಿ ತಂತ್ರಗಾರಿಕೆ ಬಳಸಿಕೊಂಡು ಉತ್ತಮ ಇಳುವರಿ ಪಡೆಯಬೇಕು. ಬರಗಾಲದಲ್ಲಿ ರೈತರು ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದರೂ ಶೇ. 70ರಷ್ಟು ಜನ ಕೃಷಿ ಅವಲಂಬಿತರಾಗಿದ್ದಾರೆ. ಹಳ್ಳಿಗಳಲ್ಲಿ  ಕೃಷಿಯಾಧಾರಿತ ಬದುಕು ನಡೆಸುತ್ತಿರುವವರು ಬಹಳಷ್ಟು ಜನರಿದ್ದಾರೆ ಎಂದು ತಿಳಿಸಿದರು. ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಡಾ.ಚಂದ್ರಪ್ಪ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಾಲರಾಜ್, ಅಮೃತ್ ಆರ್ಗ್ಯಾನಿಕ್ ಸಂಸ್ಥೆ ಯ ಕೆ. ನಾಗರಾಜ್ ಮಾತನಾಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮುನಿಯಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯೆ ಜಯಮ್ಮ ಬಾಲರಾಜ್, ತಾಲ್ಲೂಕು ಪಂಚಾಯ್ತಿ ಸದಸ್ಯೆ ಬೋರಮ್ಮ ಹಾಜರಿದ್ದರು. ಶಿಕ್ಷಕ ಹುರುಳಿ ಎಂ. ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.

ಮೇಳದಲ್ಲಿ ಸುಮಾರು 70ಕ್ಕೂ ಹೆಚ್ಚು ವಿವಿಧ ರೀತಿಯ ಮಳಿಗೆಗಳನ್ನು ತೆರೆಯಲಾಗಿದೆ. ಮೇಳವನ್ನು ಉದ್ಘಾಟಿಸಿದ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ವಿವಿಧ ಮಳಿಗೆಗಳನ್ನು ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT