ADVERTISEMENT

ನಾಯಕರ ಸಮ್ಮುಖದಲ್ಲೇ ಕಾರ್ಯಕರ್ತರ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2011, 19:30 IST
Last Updated 2 ಅಕ್ಟೋಬರ್ 2011, 19:30 IST

ಚಿತ್ರದುರ್ಗ: ಸ್ವಾಗತ ಭಾಷಣದಲ್ಲಿ ತಮ್ಮ ಮುಖಂಡರ ಹೆಸರನ್ನು ಹೇಳುವಂತೆ ಒತ್ತಾಯಿಸಿದ ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸಿದ ಪ್ರಸಂಗ ರಾಜ್ಯ ಕಾಂಗ್ರೆಸ್ ನಾಯಕರ ಸಮುಖದಲ್ಲಿ ಭಾನುವಾರ ನಡೆಯಿತು.

ನಗರದ ಒನಕೆ ಓಬವ್ವ ವೃತ್ತದಲ್ಲಿ ಭಾನುವಾರ ಆಯೋಜಿಸಿದ್ದ `ಮತದಾರರೊಂದಿಗೆ ಮುಖಾಮುಖಿ~ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ಎ. ಸೇತುರಾಮ್ ಸ್ವಾಗತ ಭಾಷಣ ಮಾಡುತ್ತಿದ್ದಾಗ ಈ ಘಟನೆ ನಡೆಯಿತು.

ವೇದಿಕೆ ಮೇಲಿದ್ದ ಮುಖಂಡರ ಹೆಸರುಗಳನ್ನು ಸರದಿಯಂತೆ ಸೇತುರಾಮ್ ಪ್ರಸ್ತಾಪಿಸುತ್ತಿದ್ದರೂ, ಮಾಜಿ ಸಂಸದ ಕೋದಂಡರಾಮಯ್ಯ ಬೆಂಬಲಿಗರು ತಮ್ಮ ಮುಖಂಡರ ಹೆಸರನ್ನು ಹೇಳುತ್ತಿಲ್ಲ ಎಂದು ಕೂಗತೊಡಗಿ ಸೇತುರಾಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಕಾರ್ಯಕರ್ತ ಕಾಕಿ ಹನುಮಂತರೆಡ್ಡಿ ದಿಢೀರ್ ವೇದಿಕೆ ಮುಂಭಾಗಕ್ಕೆ ನುಗ್ಗಿ, ಸ್ವಾಗತ ಭಾಷಣದಲ್ಲಿ ಚಳ್ಳಕೆರೆಯ ಕಾಂಗ್ರೆಸ್ ಮುಖಂಡ ರಘುಮೂರ್ತಿ ಹೆಸರು ಹೇಳಿದ್ದಾರೆ. ಹಳಬರನ್ನು ಬಿಟ್ಟು ಹೊಸಬರ ಹೆಸರು ಹೇಳುತ್ತಿದ್ದಾರೆ ಎಂದು ಜೋರಾಗಿ ಕೂಗತೊಡಗಿ ಸಭೆಗೆ ಅಡ್ಡಿಪಡಿಸಿದ. ಆಗ ವೇದಿಕೆ ಮುಂಭಾಗಕ್ಕೆ ಆಗಮಿಸಿದ ಜಿ.ಪಂ. ಸದಸ್ಯ ಹಾಗೂ ರಘುಮೂರ್ತಿ ಅವರ ಸ್ನೇಹಿತ ಬಾಬುರೆಡ್ಡಿ ಮತ್ತು ಕಾಕಿ ಹನುಮಂತರೆಡ್ಡಿ ನಡುವೆ ಜಟಾಪಟಿ ನಡೆಯಿತು.

`ನಾನು ಕಾಂಗ್ರೆಸ್ ಕಾರ್ಯಕರ್ತ. ನನ್ನ ಪ್ರಶ್ನಿಸಲು ನೀನ್ಯಾರು~ ಎಂದು ಕಾಕಿ ಹನುಮಂತರೆಡ್ಡಿ ಬಾಬುರೆಡ್ಡಿ ಜತೆ ವಾಗ್ವಾದಕ್ಕಿಳಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕಾಕಿ ಹನುಮಂತರೆಡ್ಡಿ ಅವರನ್ನು ಸ್ಥಳದಲ್ಲಿದ್ದವರು ಥಳಿಸಿದರು.
ಆಗ ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು. ವೇದಿಕೆ ಮೇಲಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ಸಹ ಮಧ್ಯ ಪ್ರವೇಶಿಸಿ ಕಾರ್ಯಕರ್ತರ ವಿರುದ್ಧ ಕೆಂಡಾಮಂಡಲರಾಗಿ ಶಾಂತಿ, ಶಿಸ್ತು ಕಾಪಾಡುವಂತೆ ಸೂಚಿಸಿದರು.

ನಂತರ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಈ ಘಟನೆಯ ಬಗ್ಗೆ ವಿಚಾರಣೆ ಮಾಡಿ ಅಶಿಸ್ತಿಗೆ ಕಾರಣರಾದವನ್ನು ಅಮಾನತುಗೊಳಿಸುತ್ತೇವೆ. ರಾಜಕೀಯ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ, ಅಶಿಸ್ತು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ಮಾತನಾಡಿ, ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ. ಅದು ಇಲ್ಲದಿದ್ದರೆ ಪಕ್ಷ ಬೆಳೆಯುವುದ್ಲ್ಲಿಲ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.