ADVERTISEMENT

ನಿಧಿ ಶೋಧ: ಮಾಜಿ ಮೇಯರ್ ಸೆರೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

ದಾವಣಗೆರೆ: ನಿಧಿ ಆಸೆಗಾಗಿ ಗುಂಪು ಕಟ್ಟಿಕೊಂಡು ಅರಣ್ಯ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದ ತಂಡವನ್ನು ಜಿಲ್ಲೆಯ ಪೊಲೀಸರು ಪತ್ತೆ ಹಚ್ಚಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಸೇರಿದಂತೆ 11 ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಒಬ್ಬರಾದ ಪುರಂದರದಾಸ ಅವರು 2003-04ನೇ ಸಾಲಿನಲ್ಲಿ ಮಂಗಳೂರು ಪಾಲಿಕೆಯ ಮೇಯರ್ ಆಗಿದ್ದರು. ಅದೇ ವ್ಯಕ್ತಿ ಈ ಹಿಂದೆ ಪೊಲೀಸ್ ಕಾನ್‌ಸ್ಟೇಬಲ್ ಆಗಿಯೂ ಕೆಲಸ ಮಾಡಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎಸ್. ವೆಂಕಟೇಶ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೊಡಗು ಜಿಲ್ಲೆಯ ಪೊನ್ನಪ್ಪ, ಜಾಬೀರ್, ಮಹಮದ್, ಅಬ್ದುಲ್ ರೆಹಮಾನ್, ಸಿದ್ದಿಕ್, ಮಂಗಳೂರಿನ ರಾಜೇಶ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲೆಯ ಪದ್ಮನಾಭ ಭಟ್, ಬಳ್ಳಾರಿ ಜಿಲ್ಲೆ ಎಂ.ಬಿ. ಅಯ್ಯನಹಳ್ಳಿಯ ಬಸವರಾಜ, ಹಡಪದ ಮಹಾಂತೇಶ್, ಜಗಳೂರು ತಾಲ್ಲೂಕು ಗೋಡೆ ಗ್ರಾಮದ ರಂಗಪ್ಪ ಬಂಧಿತ ಇತರ ಆರೋಪಿಗಳು.

ಜಿಲ್ಲೆಯ ಜಗಳೂರು ತಾಲ್ಲೂಕು ತಾರೇಹಳ್ಳಿ ಗ್ರಾಮದ ರಂಗಯ್ಯನದುರ್ಗ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದಾಗ ಶುಕ್ರವಾರ ಕಾರ್ಯಾಚರಣೆ ನಡೆಸಲಾಯಿತು. ಆರೋಪಿಗಳಿಂದ ಎರಡು ಕಾರು ಹಾಗೂ ಒಂದು ಮೋಟಾರ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.