ADVERTISEMENT

ನಿರ್ಬಂಧದೊಳಗೆ ನಾನಿಲ್ಲ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 19:30 IST
Last Updated 17 ಸೆಪ್ಟೆಂಬರ್ 2011, 19:30 IST

ಗುಲ್ಬರ್ಗ: ಯಾವುದೇ ನಿರ್ಬಂಧದೊಳಗೆ ನಾನಿಲ್ಲ. ಅದು ಬಾಹ್ಯ ಸಂಗತಿ ಮಾತ್ರ. ನನ್ನ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಸತ್ಯ ತಿಳಿಯುತ್ತದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಂದಹಾಸ ಬೀರಿದರು.

ಹೈದರಾಬಾದ್ ಕರ್ನಾಟಕ `ವಿಮೋಚನಾ ದಿನ~ದ ಅಂಗವಾಗಿ ಶನಿವಾರ ಬೆಳಿಗ್ಗೆ ನಗರಕ್ಕೆ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆದರೆ `ಒಂದೇ ಬಾರಿಗೆ ಬದಲಾವಣೆ ಮಾಡುತ್ತೇನೆ~ ಎಂಬ ಹುಚ್ಚು ಕಲ್ಪನೆಯೂ ನನಗಿಲ್ಲ. ಸಚಿವರು ವಿಧಾನ ಸೌಧಕ್ಕೆ ಬರುತ್ತಿಲ್ಲ ಎಂಬ ಆರೋಪವಿತ್ತು. ಈಗ ಬರುತ್ತಿದ್ದಾರೆ ನೋಡಿ ಎಂದು ಉದಾಹರಿಸಿದರು.

ಸಿಬಿಐ ಯಾರ ಹಿತಾಸಕ್ತಿಗೆ ಕುಣಿಯುತ್ತಿದೆ ಎಂಬುದು ದೇಶಕ್ಕೆ ಗೊತ್ತಿದೆ. ಆ ಸಾಂವಿಧಾನಿಕ ಸಂಸ್ಥೆಯ ಮೇಲೆ ಮುಖ್ಯಮಂತ್ರಿಯಾಗಿ ಹೆಚ್ಚಿನ ಟೀಕೆ ಮಾಡುವುದಿಲ್ಲ ಎಂದರು. ಪದೇ ಪದೇ ತೈಲ ಬೆಲೆ ಏರಿಕೆಯಾಗುತ್ತಿರುವುದನ್ನು ಖಂಡಿಸಿದ ಅವರು, ಕೇಂದ್ರ ಬೆಲೆ ನಿಯಂತ್ರಿಸಬೇಕು. ದರ ಸ್ಥಿರತೆಗೆ ಬಂದ ಬಳಿಕ ರಾಜ್ಯ ಸರ್ಕಾರವೂ ಸೆಸ್ ಕಡಿತದ ಬಗ್ಗೆ ಚಿಂತನೆ ನಡೆಸಬಹುದು. ಇಲ್ಲದಿದ್ದಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಂಡರೂ ಪ್ರಯೋಜನವಿಲ್ಲ ಎಂದರು.

ಲೋಕಾಯುಕ್ತರ ಮೇಲಿನ ಆರೋಪಗಳ ಬಗ್ಗೆ ಪರಿಶೀಲನೆ ನಡೆಸದೇ ಪ್ರತಿಕ್ರಿಯಿಸುವುದಿಲ್ಲ. ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿರುವ ಅಧಿಕಾರಿಗಳ ಬಗ್ಗೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜೈರಾಜ್ ನೇತೃತ್ವದ ಸಮಿತಿ ಪರಿಶೀಲನೆ ನಡೆಸಲಿದೆ. ಆ ಬಳಿಕ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.