ಕೋಲಾರ: ತಾಲ್ಲೂಕಿನ ಮಾರ್ಜೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಳಚೀಪುರದಲ್ಲಿ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಖಾಲಿ ಬಿಂದಿಗೆಗಳನ್ನು ಪ್ರದರ್ಶಿಸಿ ಧರಣಿ ನಡೆಸಿದರು.
700 ಜನರಿರುವ ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ ಕುಡಿಯುವ ನೀರು ಮತ್ತು ದಿನಬಳಕೆ ನೀರಿನ ಪೂರೈಕೆ ನಿಂತಿದೆ. ಕೆಟ್ಟಿರುವ ಕೊಳವೆ ಬಾವಿಯನ್ನು ದುರಸ್ತಿ ಮಾಡದಿರುವ ಪರಿಣಾಮ ಸಮಸ್ಯೆ ಎದುರಿಸುವಂತಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಕೊಳವೆಬಾವಿ ದುರಸ್ತಿ ಮಾಡಿ ಎಂದು ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಲೀ, ಅಧ್ಯಕ್ಷರು, ಸದಸ್ಯರಾಗಲಿ ಗಮನ ಹರಿಸಿಲ್ಲ. ಜನರಷ್ಟೆ ಅಲ್ಲದೆ ಜಾನುವಾರುಗಳಿಗೂ ನೀರಿಲ್ಲದಂತಾಗಿದೆ. ಹೈನುಗಾರಿಕೆಯನ್ನೇ ನೆಚ್ಚಿಕೊಂಡಿರುವ ರೈತರಿಗೆ ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಸ್ಯೆಯನ್ನು ಕೂಡಲೇ ನಿವಾರಿಸಬೇಕು ಎಂದು ಜಿಲ್ಲಾಧಿಕಾರಿಗಳು ಗ್ರಾಮ ಪಂಚಾಯಿತಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು. ವೈ.ನಾಗರಾಜ್, ಗೋಪಾಲಗೌಡ, ಮುನೇಗೌಡ, ಕುಮಾರ್, ಶ್ರೀನಿವಾಸ್, ಮನೋಜ್, ಮುನಿಯಪ್ಪ, ಮಲ್ಲಿಕಾರ್ಜುನ, ಮುನಿರಾಜು, ವಿಜಯಮ್ಮ, ಅಕ್ಕಯ್ಯಮ್ಮ, ಭಾಗ್ಯಮ್ಮ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.