ADVERTISEMENT

ನೀರು ಪೂರೈಕೆಗೆ ಆಗ್ರಹಿಸಿ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:30 IST
Last Updated 6 ಮಾರ್ಚ್ 2012, 19:30 IST

ಬಳ್ಳಾರಿ: ಸಮರ್ಪಕವಾಗಿ ಕುಡಿವ ನೀರು ಪೂರೈಸುವಂತೆ ಆಗ್ರಹಿಸಿ 2ನೇ ವಾರ್ಡ್ ವ್ಯಾಪ್ತಿಯ ಕಾಳಮ್ಮ ಬೀದಿ ನಿವಾಸಿಗಳು ಮಂಗಳವಾರ ಮಧ್ಯಾಹ್ನ ಖಾಲಿ ಕೊಡಗಳೊಂದಿಗೆ ರಸ್ತೆತಡೆ ನಡೆಸಿದರು.

ಹತ್ತು ದಿನಗಳಿಂದ ಕೊಳಾಯಿಯಲ್ಲಿ ನೀರು ಪೂರೈಕೆಯಾಗಿಲ್ಲ. ಇದರಿಂದ ಜನತೆ ಪರದಾಡುವಂತಾಗಿದೆ.

ಮಹಾನಗರ ಪಾಲಿಕೆಯು ಟ್ಯಾಂಕರ್ ಮೂಲಕವೂ ನೀರು ಪೂರೈಸಲು ಕ್ರಮ ಕೈಗೊಳ್ಳದ್ದರಿಂದ ನೀರಿಗೆ ಹಾಹಾಕಾರ ಶುರುವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಜನತೆ ಬೇರೆಡೆ ಹೋಗಿ ನೀರನ್ನು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಲಿಕೆ ಕೂಡಲೇ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ನೀರು ಪೂರೈಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಲ್ಲದೆ, ಪಾಲಿಕೆಯಿಂದ ಕಲುಷಿತ ನೀರು ಸರಬರಾಜಾಗುತ್ತದೆ. ನೀರು ದುರ್ವಾಸನೆಯಿಂದ ಕೂಡಿರುತ್ತದೆ. ಅಧಿಕಾರಿಗಳು ಮತ್ತು ಪಾಲಿಕೆ ಸದಸ್ಯರ ನಿರ್ಲಕ್ಷ್ಯದಿಂದಾಗಿ ಜನಸಾಮಾನ್ಯರು ತೊಂದರೆಪಡಬೇಕಾಗಿದೆ. ನಗರದ ಅನೇಕ ಕಡೆ ನೀರು ಸರಬರಾಜು ಮಾಡುವ ಪಾಲಿಕೆ, ಕಾಳಮ್ಮ ಬೀದಿಗೆ ಮಾತ್ರ ನೀರು ಪೂರೈಸುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಮರ್ಪಕ ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಈ ಭಾಗದ ಪಾಲಿಕೆ ಸದಸ್ಯರಿಗೆ ತಿಳಿಸಬೇಕೆಂದರೆ ಅವರು ಸಂಪರ್ಕಕ್ಕೆ ದೊರೆಯುತ್ತಿಲ್ಲ. ಈ ರೀತಿ ಆದರೆ ಸಾಮಾನ್ಯ ಜನತೆ ಯಾರ ಬಳಿ ತಮ್ಮ ದೂರು ಹೇಳಿಕೊಳ್ಳಬೇಕು ಎಂದು ಅನೇಕರು ಪ್ರಶ್ನಿಸಿದರು.

ಪಾಲಿಕೆ ಸದಸ್ಯೆ ಲತಾ ಚೌಧರಿ ಅವರ ಪತಿ ಭಾಸ್ಕರ್ ಸ್ಥಳಕ್ಕೆ ಭೇಟಿ ನೀಡಿ, ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ನೂರ್ ಅಹಮ್ಮದ್, ಮುಮ್ತಾಜ್, ಹೊಸೂರಮ್ಮ, ಬಾದುಲ್ಲಾಬಿ, ಆಶಾ, ಬಾಷಾ, ಖ್ವಾಜಾ,  ರಫೀಕ್, ಶೇಕ್‌ಶಾವಲಿ, ನಿಜಾಮ್, ಇಕ್ಬಾಲ್, ಮೌಲಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.