ADVERTISEMENT

ನೀಲಂ ಚಂಡಮಾರುತ ಮಳೆ-ಗಾಳಿ: ಅಪಾರ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2012, 19:30 IST
Last Updated 2 ನವೆಂಬರ್ 2012, 19:30 IST

ಹಗರಿಬೊಮ್ಮನಹಳ್ಳಿ: ತಮಿಳುನಾಡು ಮತ್ತು ಆಂಧ್ರ ಕರಾವಳಿಯಲ್ಲಿ ಬೀಸಿದ ನೀಲಂ ಚಂಡಮಾರುತದಿಂದ ತಾಲ್ಲೂಕಿನಾದ್ಯಂತ ಬುಧವಾರ ಸಂಜೆಯಿಂದ ಶುಕ್ರವಾರ ಮಧ್ಯಾಹ್ನದವರೆಗೆ ಮಳೆ ಸುರಿದಿದೆ. ಸತತ ಮಳೆಗೆ ತಾಲ್ಲೂಕಿನ ಬನ್ನಿಗೋಳ ಗ್ರಾಮದಲ್ಲಿ ಮೆಕ್ಕೆ ಜೋಳ ಮತ್ತು ಈರುಳ್ಳಿ ಬೆಳೆ ನಾಶವಾಗಿ ಅಪಾರ ಹಾನಿ ಸಂಭವಿಸಿದೆ.

ಮಾರಾಟಕ್ಕೆಂದು ಸಿದ್ಧಪಡಿಸಿದ್ದ ಬೆಳೆಗಳು ನೀರು ಪಾಲಾಗಿವೆ. ಚೀಲದಲ್ಲಿ ಸಂಗ್ರಹಿಸಿದ್ದ ಈರುಳ್ಳಿ ಬೆಳೆ ಚೀಲದಲ್ಲಿಯೇ ಮೊಳಕೆಯೊಡೆದಿದ್ದು ಸುಮಾರು ರೂ 1.20 ಕೋಟಿಗೂ ಅಧಿಕ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ತಾಲ್ಲೂಕಿನಲ್ಲಿ ಸರಾಸರಿ 50 ಮಿ.ಮೀ. ಮಳೆಯಾಗಿದ್ದರೆ, ತಂಬ್ರಹಳ್ಳಿ ಹೋಬಳಿಯ ಬನ್ನಿಗೋಳು ಗ್ರಾಮದ ಸುತ್ತಮುತ್ತ 64.50 ಮಿ.ಮೀ. ಮಳೆಯಾಗಿದೆ. ಗ್ರಾಮದ ಏತ ನೀರಾವರಿ ಯೋಜನೆ ಮತ್ತು ಕೊಳವೆ ಬಾವಿ ಮೂಲಕ ಕೃಷಿ ಕೈಗೊಂಡು ನೂರಾರು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಕಟಾವಿನ ಹಂತದಲ್ಲಿದ್ದ ಮೆಕ್ಕೆಜೋಳ  ಮಳೆಯ ಹೊಡೆತಕ್ಕೆ ನೆಲ ಕಚ್ಚಿದೆ.

ಗ್ರಾಮದಲ್ಲಿ 600 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆಸಲಾಗಿದ್ದ ಈರುಳ್ಳಿಯನ್ನು ಒಣಗಿಸಲೆಂದು ಜಮೀನಿನಲ್ಲಿ ಶೇಖರಿಸಿದ್ದರೆ, ಇನ್ನೂ ಹಲವು ರೈತರು ಮಾರಾಟಕ್ಕೆ ಕಳಿಸಲು ಚೀಲಗಳಲ್ಲಿ ಸಂಗ್ರಹಿಸಿ ಜಮೀನಿನಲ್ಲಿಯೇ ಬಿಟ್ಟಿದ್ದರು. ಒಟ್ಟು 6,000 ಕ್ವಿಂಟಲ್ ಈರುಳ್ಳಿ ಬೆಳೆ ನೀರು ಪಾಲಾಗಿ ಕೊಳೆಯತೊಡಗಿದೆ.

ಮೈನಳ್ಳಿ ಕೊಟ್ರೇಶ್, ಮೈನಳ್ಳಿ ಲಿಂಗಾರೆಡ್ಡಿ, ಹನುಮರೆಡ್ಡಿ, ಅಂಗಡಿ ಫಕೀರಪ್ಪ, ಕಾಗಿ ಮಾರುತೇಶ್, ಹ್ಯಾಟಿ ವೆಂಕಣ್ಣ ಮತ್ತಿತರರು ತಲಾ 5-6 ಎಕರೆ ಜಮೀನಿನಲ್ಲಿ ಬೆಳೆದ ಈರುಳ್ಳಿ ನೀರುಪಾಲಾಗಿದೆ.

ಗ್ರಾಮದ ಕೊಳ್ಳಿ ಮುದಿಯಪ್ಪ, ಪೂಜಾರ ಮರಿಯಪ್ಪ, ಗಡಾದ ಮಲ್ಲಿಕಾರ್ಜುನ, ಯಂಕಪ್ಪ ಹಾಗೂ ಶೇಖರಪ್ಪ ಸಹಿತ ಹಲವಾರು ರೈತರು 400 ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳದ ಬೆಳೆ ನಿರಂತರ ಸುರಿದ ಮಳೆ ಮತ್ತು ಗಾಳಿಗೆ ನೆಲಕಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.