ADVERTISEMENT

ನೂತನ ವೈದ್ಯಕೀಯ ಪಠ್ಯಕ್ರಮಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 19:00 IST
Last Updated 5 ಫೆಬ್ರುವರಿ 2011, 19:00 IST

ದಾವಣಗೆರೆ: ‘ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ’ ಜಾರಿಗೊಳಿಸಲು ಉದ್ದೇಶಿಸಿದ ವೈದ್ಯಕೀಯ ಪಠ್ಯಕ್ರಮ ನವೀಕರಣ ಮಸೂದೆ ‘ವಿಜ್ಹನ್-2015’ ವಿರೋಧಿಸಿ ಜೆಜೆಎಂ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕರು ಶನಿವಾರ ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸಿದರು.

ಪ್ರಸ್ತುತ ಜಾರಿಯಲ್ಲಿರುವ ಪಠ್ಯಕ್ರಮ ಬದಲಿಸುವ ಯೋಜನೆಯೇ ಅವೈಜ್ಞಾನಿಕವಾಗಿದೆ. ಕಣ್ಣು, ಕಿವಿ, ಮೂಗು, ಗಂಟಲು (ಇಎನ್‌ಟಿ), ವೈದ್ಯಕೀಯ ನ್ಯಾಯಶಾಸ್ತ್ರ, ಚರ್ಮರೋಗ, ಕ್ಷಕಿರಣ, ಅರಿವಳಿಕೆ ಮತ್ತಿತರ ವಿಷಯಗಳನ್ನು ಐಚ್ಛಿಕಗೊಳಿಸಿದರೆ, ಆ ವಿಷಯಗಳಲ್ಲಿ ವಿದ್ಯಾರ್ಥಿಗೆ ಜ್ಞಾನವೇ ದೊರೆಯುವುದಿಲ್ಲ. ಇದು ಮುಂದೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರಿಗೆ ಸಮಸ್ಯೆ ತಂದೊಡ್ಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತುತ ಎಂಬಿಬಿಎಸ್ ಶೈಕ್ಷಣಿಕ ಅವಧಿ ಒಟ್ಟು ಐದೂವರೆ ವರ್ಷವಿದೆ. ಆದರೆ, ಅದನ್ನು ಐದು ವರ್ಷಕ್ಕೆ ಸೀಮಿತಗೊಳಿಸಲಾಗುತ್ತಿದೆ. ಹೊಸ ಪಠ್ಯಕ್ರಮ ರೂಪಿಸುವಾಗ ಸಮಿತಿಯ ಸದಸ್ಯರು ಎಲ್ಲ ವೈದ್ಯಕೀಯ ವಿಭಾಗಗಳಿಂದ ಅಭಿಪ್ರಾಯ ಪಡೆದಿಲ್ಲ. ವೈದ್ಯಕೀಯ ವಿದ್ಯಾಲಯಗಳಲ್ಲಿ 18 ವಿಭಾಗಗಳಿವೆ. ಆದರೆ, ಸಮಿತಿಯಲ್ಲಿ 8 ವಿಭಾಗಗಳಲ್ಲಿ ಮಾತ್ರ ಸದಸ್ಯರಿದ್ದಾರೆ. ಇನ್ನೂ 10 ವಿಭಾಗಗಳ ಸದಸ್ಯರ ಅಭಿಪ್ರಾಯವನ್ನೇ ಪಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಠ್ಯಕ್ರಮ ನವೀಕರಣ ಮಸೂದೆಯನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಚ್. ವಿಜಯಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಪ್ರಾಧ್ಯಾಪಕರಾದ ಡಾ.ವಿಶ್ವನಾಥ್, ಡಾ.ರಾಜಶೇಖರ್, ಡಾ.ಪ್ರಭುರಾಜ್, ಡಾ.ಸಂತೋಷ್,ಡಾ.ರಾಜು, ಡಾ.ಸತೀಶ್‌ಬಾಬು, ಡಾ.ಶಿವಕುಮಾರ್, ಡಾ.ಉಮಾಕಾಂತ್, ಡಾ.ಸುನೀಲ್, ಡಾ.ಪ್ರೀತಿ, ಡಾ.ಜ್ಯೋತಿ, ಡಾ.ಶಶಿಕಲಾ, ಡಾ.ರಜನಿ, ಡಾ.ಕಿರಣ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.