ADVERTISEMENT

ನೆಮ್ಮದಿ ಪಡೆಯಲು ಧರ್ಮ ದಾರಿದೀಪ ಆಗಲಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 6:40 IST
Last Updated 7 ಫೆಬ್ರುವರಿ 2011, 6:40 IST

ತುಮರಿ: ಧರ್ಮ-ದೇವರುಗಳು ಮಂದಿರ ಮಸೀದಿ ಚರ್ಚಿನೊಳಗೆ ಮಾತ್ರ ಇವೆ ಎಂಬ ಭ್ರಮೆಯಿಂದ ಹೊರಬಂದು ಕರುಣೆ, ಪ್ರೀತಿ, ಮಾನವೀಯತೆಯ ಮೇರುಗುಣಗಳಲ್ಲಿ ಧರ್ಮದ ಸಾರವಿದೆ ಎಂಬುದು ಅರ್ಥವಾಗಬೇಕಾದ ಸತ್ಯ ಎಂದು ಮಂಗಳೂರು ಸಾಯಿಬಾಬಾ ಟ್ರಸ್ಟ್ ಸದಸ್ಯ ರಾಜರಾಯ ತೀರ್ಥಹಳ್ಳಿ ನುಡಿದರು.

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಸತ್ಯಸಾಯಿ ಬಾಬಾ ಟ್ರಸ್ಟ್ ಮತ್ತು ಎ.ಜೆ. ಶೆಟ್ಟಿ ಆಸ್ಪತ್ರೆ ಸಹಯೋಗದೊಂದಿಗೆ ಸ್ಥಳೀಯ ನಾಗರಿಕ ವೇದಿಕೆ ನೇತೃತ್ವದಲ್ಲಿ ನಡೆದ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.

ಮನುಷ್ಯ ಸುಖದ ಅನ್ವೇಷ್ವಣೆಯಲ್ಲಿ ಹೊರಟಿದ್ದಾನೆ. ಹಣದ ಹಿಂದೆ ಬಿದ್ದು, ಹೊರಟ ಮನಸ್ಸು, ಅದನ್ನು ಗಳಿಸಿದ ನಂತರ ನೆಮ್ಮದಿ ಕಳೆದುಕೊಳ್ಳುತ್ತಿದೆ. ಅಂದರೆ ಎಲ್ಲವೂ ಇದ್ದು ಏನೂ ಎಲ್ಲ ಎಂಬ ಭಾವದಲ್ಲಿ ಹತಾಶನಾಗುವ ಸ್ಥಿತಿ. ಆರೋಗ್ಯ ನೆಮ್ಮದಿ ಕಳೆದುಕೊಂಡ ಹೊತ್ತಿನಲ್ಲಿ ಧರ್ಮ ದಾರಿ ದೀಪವಾಗಬೇಕು ಎಂದರು.

ಧರ್ಮ ಮಾನವೀಯ ಮುಖದೊಂದಿಗೆ ಅನಾವರಣ ಗೊಳ್ಳಬೇಕು. ಸತ್ಯಸಾಯಿ ಬಾಬಾ ಟ್ರಸ್ಟ್ ದೇಶಾದ್ಯಂತ ಇಂತಹ ಶಿಬಿರಗಳನ್ನು ಆಯೋಜಿಸುವುದರ ಮೂಲಕ ಸ್ವಸ್ಥ್ಯ ಸಮಾಜ ಕಟ್ಟಲು ಶ್ರಮಿಸುತ್ತಿದೆ. ದ್ವೀಪದಲ್ಲಿ ಉಚಿತ ಆರೋಗ್ಯ ಶಿಬಿರ ಜನರಿಗೆ ಅನುಕೂಲವಾಗಲಿದ್ದು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ರೋಗಿಗಳಿಗೆ ಮಂಗಳೂರಿನ ಏ.ಜೆ. ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಚಿಕಿತ್ಸೆ ನೀಡುವುದಾಗಿ ವಿವರಿಸಿದರು.ತಾ.ಪಂ. ಸದಸ್ಯ ಗಂಟೆ ಹರೀಶ್ ಶಿಬಿರ ಉದ್ಘಾಟಿಸಿದರು.

ಡಾ.ನಾಗಭೂಷಣ್, ಡಾ.ರಮೇಶ್ ಹಾಜರಿದ್ದರು. ತುಮರಿ ಗ್ರಾ.ಪಂ. ಅಧ್ಯಕ್ಷೆ ಹೇಮಾವತಿ ರಾಮಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಟೇಲ್ ಸುಬ್ರಾವ್ ಪ್ರಾಸ್ತಾವಿಕವಾಗಿ  ಮಾತನಾಡಿದರು. ಎ.ಜೆ ಆಸ್ಪತ್ರೆಯ ಡಾ.ಗುಣರಂಜನ್, ಡಾ.ವಿಜಯಸಾಯಿ, ಡಾ.ಬಾಲಕೃಷ್ಣ, ನಂಜೇಶ್‌ಕುಮಾರ್, ಗೋವಿಂದ ಭಟ್ ಜತೆ ಟ್ರಸ್ಟ್‌ನ ಭದ್ರಾವತಿ, ತೀರ್ಥಹಳ್ಳಿ ತಾಲ್ಲೂಕು ಶಾಖೆಯ ಸ್ವಯಂಸೇವಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸಾವಿರಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಪಾಲ್ಗೊಂಡು ಉಪಯೋಗವನ್ನು ಪಡೆದುಕೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.