ADVERTISEMENT

ನೋಟುಗಳ ಚೂರಿನ ಕಂತೆ ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2012, 19:30 IST
Last Updated 11 ಜೂನ್ 2012, 19:30 IST
ನೋಟುಗಳ ಚೂರಿನ ಕಂತೆ ಪತ್ತೆ
ನೋಟುಗಳ ಚೂರಿನ ಕಂತೆ ಪತ್ತೆ   

ಬಳ್ಳಾರಿ: ನಗರದ ಕೈಗಾರಿಕಾ ವಸಾಹತು ಪ್ರದೇಶದಲ್ಲಿನ ತಿಪ್ಪೆಯಲ್ಲಿ ಕರೆನ್ಸಿ ನೋಟಿನ ಚೂರುಗಳ ಕಂತೆ ಪತ್ತೆಯಾಗಿ, ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿದ ಘಟನೆ ಸೋಮವಾರ ಸಂಭವಿಸಿದೆ.

ನಗರದ ಹೊರ ವಲಯದ ಬೆಂಗಳೂರು ರಸ್ತೆಯಲ್ಲಿರುವ ಗುಗ್ಗರಹಟ್ಟಿ ಬಳಿಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿನ ಕೃಷ್ಣಾ ಪ್ಲೈವುಡ್ ಇಂಡಸ್ಟ್ರಿಯವರು  ಪ್ಲೈವುಡ್ ತಯಾರಿಸಲು ಬಳಸಲೆಂದೇ 400 ಮೂಟೆಗಳಷ್ಟು ಹಳೆಯ ಕರೆನ್ಸಿ ನೋಟುಗಳ ಚೂರುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಖರೀದಿಸಿ ತಂದಿದ್ದು, ಪ್ಲೈವುಡ್ ತಯಾರಿಸಲು ಸಾಧ್ಯವಾಗದ ಕಾರಣ ಆ ಚೂರುಗಳನ್ನು ಬಳಸದೆ ಕೈಬಿಟ್ಟಿದ್ದರು.

ಆದರೆ, ಆ ನೋಟುಗಳ ಚೂರುಗಳ ಕಂತೆಯೊಂದು ತಿಪ್ಪೆಯಲ್ಲಿ ಪತ್ತೆಯಾಗಿದ್ದರಿಂದ ಸಾರ್ವಜನಿಕರು ಸೋಮವಾರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಹಿಂದುಪುರದಿಂದ ಪ್ಲೈವುಡ್ ತಯಾರಿಕೆಯ ಕಚ್ಚಾ ಸಾಮಗ್ರಿ ತರುತ್ತಿದ್ದ ಪ್ಲೈವುಡ್ ತಯಾರಿಕೆ ಘಟಕದ ಮಾಲೀಕ ಶ್ರೀನಿವಾಸ್, 2010ರಲ್ಲಿ ರಿಸರ್ವ್ ಬ್ಯಾಂಕ್‌ನಿಂದ ನೇರವಾಗಿ ಟೆಂಡರ್‌ನಲ್ಲಿ ಹಳೆಯ ನೋಟಿನ ಚೂರುಗಳನ್ನು ಖರೀದಿಸಿ ತಂದಿದ್ದರು. ಆದರೆ, ನೋಟಿನ ಚೂರುಗಳಿಂದ ಪ್ಲೈವುಡ್ ತಯಾರಿಸುವುದು ಸಾಧ್ಯವಾಗದ ಕಾರಣ ಅವನ್ನೆಲ್ಲ ಚೀಲದಲ್ಲಿ ಹಾಗೆಯೇ ಇರಿಸಿದ್ದರು.

ಅವರ ಬಳಿ ಕೆಲಸ ಮಾಡುವ ಕಾರ್ಮಿಕನೊಬ್ಬ ಕಸ ಗುಡಿಸುವಾಗ ಒಂದು ಕಂತೆ ಕಸದೊಂದಿಗೆ ಸೇರಿದ್ದು, ಅದನ್ನು ನೋಡಿದ ಜನರಲ್ಲಿ ಕುತೂಹಲ ಮೂಡಲು ಕಾರಣವಾಗಿದೆ. ಈ ಕುರಿತು ವಿಚಾರಣೆ ನಡೆಸಿದ ಪೊಲೀಸರು, ರಿಸರ್ವ್ ಬ್ಯಾಂಕ್‌ನಿಂದ ಹಳೆಯ ನೋಟಿನ ಚೂರುಗಳನ್ನು ಖರೀದಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ್ದು, ಶ್ರೀನಿವಾಸ್ ಅವರ ಬಳಿಯಿದ್ದ ಎಲ್ಲ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗಾಂಧಿನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ದೇಶದಾದ್ಯಂತ ಬಳಸಲಾದ ಕರೆನ್ಸಿ ನೋಟುಗಳು ಚಲಾವಣೆಗೆ ಯೋಗ್ಯವಲ್ಲ ಎಂಬಂತಾದಾಗ, ಅವುಗಳನ್ನು ಪುನಃ ಸಂಗ್ರಹಿಸುವ ರಿಸರ್ವ್ ಬ್ಯಾಂಕ್, ನೋಟುಗಳನ್ನು ಚೂರುಚೂರು ಮಾಡಿ, ಟೆಂಡರ್‌ನಲ್ಲಿ ಮಾರಾಟ ಮಾಡುತ್ತದೆ. ಆ ಚೂರುಗಳಿಂದ ಪ್ಲೈವುಡ್ ತಯಾರಿಸಲಾಗುತ್ತದೆ ಎಂದು ಪೊಲೀಸರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.