ADVERTISEMENT

ನ್ಯಾಯಾಂಗದ ಘನತೆ ಕುಸಿತ: ನ್ಯಾ. ಹೆಗ್ಡೆ ಆತಂಕ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST
ನ್ಯಾಯಾಂಗದ ಘನತೆ ಕುಸಿತ: ನ್ಯಾ. ಹೆಗ್ಡೆ ಆತಂಕ
ನ್ಯಾಯಾಂಗದ ಘನತೆ ಕುಸಿತ: ನ್ಯಾ. ಹೆಗ್ಡೆ ಆತಂಕ   

ದಾವಣಗೆರೆ: ನ್ಯಾಯಾಂಗದಲ್ಲೂ ಕೇಳಿ ಬಂದ ಭ್ರಷ್ಟಾಚಾರ ಆರೋಪಗಳಿಂದಾಗಿ ಜನತೆ ಅದರ ಮೇಲೆ ಇಟ್ಟ ನಂಬಿಕೆಗೆ ಧಕ್ಕೆಯಾಗಿದ್ದು, 1990ರ ನಂತರ ನ್ಯಾಯಾಂಗದ ಘನತೆ ತೀವ್ರವಾಗಿ ಕುಸಿದಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯದ ದಶಮಾನೋತ್ಸವದ ಅಂಗವಾಗಿ ಜಿಲ್ಲಾ ವಕೀಲರ ಸಂಘ ಶನಿವಾರ ಹಮ್ಮಿಕೊಂಡಿದ್ದ ಉಪನ್ಯಾಸ ಮಾಲಿಕೆಯಲ್ಲಿ ‘ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗದ ಮಹತ್ವ’ ಕುರಿತು ಅವರು ಮಾತನಾಡಿದರು.

ಸರ್ಕಾರದ ವಿರುದ್ಧ ಜನತೆಗೆ ಆಗುವ ಅನ್ಯಾಯವನ್ನು ತಪ್ಪಿಸುವ ಉದ್ದೇಶದಿಂದ ಹಾಗೂ ನ್ಯಾಯ ಎಲ್ಲರಿಗೂ ಸಮಾನವಾಗಿ ದೊರೆಯಬೇಕು ಎಂಬ ಆಶಯದಿಂದ ಸ್ವತಂತ್ರ ಹಾಗೂ ಪ್ರಬಲವಾದ ನ್ಯಾಯಾಂಗ ವ್ಯವಸ್ಥೆಯನ್ನು ಜಾರಿಗೆ ತಂದರು. 1990ರವರೆಗೂ ನ್ಯಾಯಾಂಗ ತನ್ನ ಘನತೆಯನ್ನು ಉಳಿಸಿಕೊಂಡಿತ್ತು. ಕೆಳ ನ್ಯಾಯಾಲಯಗಳಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ಮುಖ್ಯ ನ್ಯಾಯಾಧೀಶರು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಆದರೆ, ನ್ಯಾಯಮೂರ್ತಿ ರಾಮಸ್ವಾಮಿ ಪ್ರಕರಣದ ನಂತರ ನ್ಯಾಯಾಲದ ಮೇಲಿದ್ದ ನಂಬಿಕೆ ಕ್ಷೀಣಿಸಲು ಆರಂಭವಾಯಿತು ಎಂದು ವಿಶ್ಲೇಷಿಸಿದರು.

ಶಾಸಕಾಂಗ ಹಾಗೂ ಕಾರ್ಯಾಂಗ ಮಹಾಭಿಯೋಗ (ಇಂಪೀಚ್ಮೆಂಟ್) ಅಧಿಕಾರವನ್ನು ಬಳಸಿಕೊಂಡು ನ್ಯಾಯಾಂಗದ ಮೇಲೆ ಸವಾರಿ ಮಾಡಿವೆ. ನ್ಯಾಯಾಧೀಶರು ಭ್ರಷ್ಟರಾಗಲು ವಕೀಲರ ಪಾತ್ರವೂ ಮುಖ್ಯವಾಗಿರುತ್ತದೆ. ವಕೀಲರು ತಮ್ಮ ನಡವಳಿಕೆಗಳನ್ನು ಬದಲಾ ಯಿಸಿಕೊಳ್ಳಬೇಕು. ಎಲ್ಲರೂ ಸೇರಿ ನ್ಯಾಯಾಂಗದಲ್ಲಿ ದೊಡ್ಡ ಬದಲಾ ವಣೆ ತರಬೇಕು ಎಂದು ಕರೆ ನೀಡಿದರು.

ಕಾನೂನು ತಜ್ಞ ಎಸ್.ಎಚ್. ಪಟೇಲ್ ಮಾತನಾಡಿದರು. ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಬಸವರಾಜ್ ಎಸ್ ತಡಹಾಳ್ ಉಪಸ್ಥಿತರಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಮಚಂದ್ರ ಕಲಾಲ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.