ADVERTISEMENT

ಪಕ್ಷ ರಾಜಕಾರಣ ಮಿತಿ ಮೀರಿ ಬೆಳೆದರೆ ಅನಾಹುತ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 19:30 IST
Last Updated 11 ಫೆಬ್ರುವರಿ 2012, 19:30 IST

ಶ್ರೀರಂಗಪಟ್ಟಣ: `ಪಕ್ಷ ರಾಜಕಾರಣ ತನ್ನ ಪರಿಮಿತಿ ಮೀರಿ ಬೆಳೆದಿರುವುದು ಅನಾಹುತಕ್ಕೆ ಎಡೆ ಮಾಡಿಕೊಟ್ಟಿದೆ~ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದರು. ಪಟ್ಟಣದಲ್ಲಿ ಶನಿವಾರ ಸರ್ವೋದಯ ಮೇಳದ 2ನೇ ದಿನದ ವಿಚಾರ ಗೋಷ್ಠಿಗೂ ಮುನ್ನ ಸುದ್ದಿಗಾರರ ಜತೆ ಅವರು ಮಾತನಾಡಿದರು.

ದೇಶದಲ್ಲಿ 1184 ನೋಂದಾಯಿತ ರಾಜಕೀಯ ಪಕ್ಷಗಳಿವೆ. ಈ ಬಹು ಪಕ್ಷ ಪದ್ಧತಿ ರಾಜಕೀಯ ಅಸ್ಥಿರತೆಗೆ ಮೂಲ ಕಾರಣವಾಗಿದೆ. ಶಾಸಕರು, ಸಂಸದರನ್ನು ಮಾರಾಟದ ವಸ್ತುವಿನಂತೆ ಖರೀದಿಸಲಾಗುತ್ತಿದೆ. ಪಕ್ಷಾಂತರ ಪಿಡುಗು ಜನತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ. ಮತದಾರರು ಕೂಡ  ವೋಟುಗಳನ್ನು ಹೆಂಡ, ಹಣಕ್ಕೆ ಮಾರಿಕೊಳ್ಳುತ್ತಿದ್ದಾರೆ. ಬ್ರಿಟನ್ ಮಾದರಿಯಲ್ಲಿ `ಶ್ಯಾಡೊ ಪಾರ್ಲಿಮೆಂಟ್~ ವ್ಯವಸ್ಥೆ ಬರಬೇಕು ಎಂದು ಅಭಿಪ್ರಾಯಪಟ್ಟರು.

ಹಿರಿಯ ಗಾಂಧಿವಾದಿ ಸುರೇಂದ್ರ ಕೌಲಗಿ ಮಾತನಾಡಿ, ನಮ್ಮದು ಜನತಾ ಪ್ರಭುತ್ವವೆ? ಅಥವಾ ಹಣದ ಪ್ರಭುತ್ವವೆ? ಎಂಬ ಅನುಮಾನ ಕಾಡುತ್ತಿದೆ. ಭ್ರಷ್ಟಾಚಾರ, ನಿರುದ್ಯೋಗ, ಸಾಮಾಜಿಕ ಅಶಾಂತಿ ಹೆಚ್ಚುತ್ತಿದೆ. ಜನರ ಪಾಲುದಾರಿಕೆಯ ಜನತಾ ಪ್ರಭುತ್ವ ಸ್ಥಾಪನೆಯಾಗಬೇಕು. ಗಾಂಧಿ ಮಾರ್ಗದಲ್ಲಿ ಮಾತ್ರ ಅದು ಸಾಧ್ಯ ಎಂದರು.

ವಿವೇಕಾನಂದ ಯೂತ್ ಮೂವ್‌ಮೆಂಟ್ ಅಧ್ಯಕ್ಷ ಡಾ.ಆರ್. ಬಾಲಸುಬ್ರಹ್ಮಣ್ಯಂ ಮಾತನಾಡಿ, ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯಕ್ಕೂ ಇಂದಿನ ವ್ಯವಸ್ಥೆಗೂ ಕಿಂಚಿತ್ತೂ ಹೋಲಿಕೆ ಇಲ್ಲ. ಗ್ರಾಮ ಸಭೆಗಳು ಶಾಸಕರ ಮನೆಯಲ್ಲಿ ನಡೆಯುತ್ತಿವೆ. ಜೈಲಿನಿಂದ ಈಚೆಗೆ ಬರುವ ಆರೋಪಿಗಳನ್ನು ಸ್ವಾಮೀಜಿಗಳು ಸ್ವಾಗತಿಸುತ್ತಾರೆ. ಜನರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ ಎಂದು ವಿಷಾದಿಸಿದರು.

ಡಾ.ಎಚ್.ಆರ್.ಗೋವಿಂದಯ್ಯ `ಗಾಂಧಿ ಬೇಕೆ? ಬೇಡವೆ?~ ಎಂಬ ವಿಷಯ ಕುರಿತು ಮಾತನಾಡಿದರು. ಜಯದೇವ್, ಎಚ್.ಎಲ್. ಕೇಶವಮೂರ್ತಿ, ಎಸ್.ಜಿ. ಪ್ರಕಾಶ್ ಮಾತನಾಡಿದರು. ಡಾ. ಸುಜಯಕುಮಾರ್, ಭಾಗ್ಯಮ್ಮ ಲಿಂಗಣ್ಣ,  ಎಸ್.ಆರ್. ರಾಮಚಂದ್ರರಾವ್, ಗುಂಡಪ್ಪ ಗೌಡ, ಅರಳಕುಪ್ಪೆ ಸಿದ್ದೇಗೌಡ, ಎಸ್. ಹೊನ್ನಯ್ಯ, ಕೆ.ಎಸ್. ನಂಜುಂಡೇಗೌಡ ಇತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.