ADVERTISEMENT

ಪಟ್ಟಣ ಪಂಚಾಯಿತಿ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ಸೋಮವಾರಪೇಟೆ: ಇಲ್ಲಿಯ ಪಟ್ಟಣ ಪಂಚಾಯಿತಿಯು ಅಕ್ರಮ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿ ತಾಲ್ಲೂಕು ಜೆಡಿಎಸ್ ಕಾರ್ಯಕರ್ತರು ಬುಧವಾರ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ವಿ.ಪಿ.ಶಶಿಧರ್, ತಾಲೂಕು ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್ ನೇತೃತ್ವದಲ್ಲಿ ಪಂಚಾಯಿತಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಪಂಚಾಯಿತಿ ಅಧ್ಯಕ್ಷರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಪಂಚಾಯಿತಿಯಲ್ಲಿ ಭ್ರಷ್ಟಾಚಾರಕ್ಕೆ ತಾಂಡವವಾಡುತ್ತಿದೆ. ಆಡಳಿತದಲ್ಲಿ ದಕ್ಷತೆಯಿಲ್ಲ. ಎಲ್ಲವೂ ಪಕ್ಷಪಾತದಿಂದ ಕೂಡಿದೆ. ಪಂಚಾಯಿತಿಗೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಆದ್ದರಿಂದ ಕೂಡಲೇ ಆಡಳಿತ ಮಂಡಳಿಯನ್ನು ವಿಸರ್ಜಿಸಬೇಕೆಂದು ವಿ.ಪಿ.ಶಶಿಧರ್ ಒತ್ತಾಯಿಸಿದರು.

ರೂ.1.25 ಕೋಟಿ ವೆಚ್ಚದ ಹೈಟೆಕ್ ಮಾರುಕಟ್ಟೆಯ ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ. ಮಾರುಕಟ್ಟೆ ಕಾಮಗಾರಿಗೆ ಶೇ. 32ರಷ್ಟು ಹೆಚ್ಚುವರಿ ಅನುದಾನ ನೀಡಲಾಗಿದೆ. ಈ ಸಾಲಿನಲ್ಲಿ ಮತ್ತೆ ಅದೇ ಕಾಮಗಾರಿಗೆ ಹೆಚ್ಚುವರಿ ಅನುದಾನ ನೀಡಲು ಆಡಳಿತ ಮಂಡಳಿ ಸರ್ವಾನುಮತದ ನಿರ್ಣಯ ಕೈಗೊಂಡು ಪಂಚಾಯಿತಿ ಹಣವನ್ನು ಪೋಲು ಮಾಡುತ್ತಿದೆ ಎಂದು ಆರೋಪಿಸಿದರು.

ಜೆಡಿಎಸ್ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ್, ಪ್ರಮುಖರಾದ ಮಾರ್ಟ್ನಳ್ಳಿ ಸುರೇಶ್, ಕಿಬ್ಬೆಟ್ಟ ಮಧು, ಮಸಗೋಡು ಸತೀಶ್, ಚಿಕ್ಕತೋಳೂರು ನಾಗರಾಜ್, ಮಹೇಶ್ ಹಾಗೂ ಗಣೇಶ್, ಪಂಚಾಯಿತಿ ಆಡಳಿತ ವೈಖರಿಯ ಬಗ್ಗೆ ಕಿಡಿಕಾರಿದರು.

ಪ್ರತಿಭಟನೆ ಸಂದರ್ಭ ಜಿ.ಪಂ ಸದಸ್ಯೆ ಎನ್.ಎಸ್.ಗೀತಾ, ತಾ.ಪಂ. ಸದಸ್ಯ ಎಚ್.ಆರ್.ಸುರೇಶ್, ಪವಿತ್ರ ದೇವೇಂದ್ರ, ಪ್ರಮುಖರಾದ ಎಸ್.ಎಂ.ಡಿಸಿಲ್ವ, ಸಂಜಯ್ ಜೀವಿಜಯ, ಸಿ.ಎಸ್.ಅಶ್ವತ್ಥ್, ಬಾಬು ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.