ADVERTISEMENT

ಪದವಿ ಪೂರ್ವ ಶಿಕ್ಷಣ ಬಲಗೊಳಿಸಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ಮಂಡ್ಯ: ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಮುಖ್ಯತೆ ಹೊಂದಿರುವ ಪದವಿ ಪೂರ್ವ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾದ ಅಗತ್ಯವಿದೆ ಎಂದು ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಅಭಿಪ್ರಾಯಪಟ್ಟರು.

ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಭಾನುವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ `ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ನೀತಿ ಜಾರಿ~ ಕುರಿತ ವಿಚಾರಗೋಷ್ಠಿ ಮತ್ತು ಕಾರ್ಯಕಾರಿ ಮಂಡಳಿ ಸಭೆ ಉದ್ಘಾಟಿಸಿ ಮಾತನಾಡಿದರು.

ಪದವಿ ಪೂರ್ವ ಹಂತವನ್ನು ಪ್ರೌಢ ಶಿಕ್ಷಣದ ಜತೆಗೆ ವಿಲೀನಗೊಳಿಸುವ ಚಿಂತನೆ ಅವೈಜ್ಞಾನಿಕ. ಇದರ ವಿರುದ್ಧ ಶಿಕ್ಷಣ ತಜ್ಞರು ಹೋರಾಟ ಮಾಡಬೇಕು. ವಿಲೀನ ಚಿಂತನೆ ವೈಚಾರಿಕತೆಯಿಂದ ದೂರವಾಗಿದೆ ಎಂದರು.

ಪದವಿ ಪೂರ್ವ ಶಿಕ್ಷಣ ಇಂದು ಗುಣಮಟ್ಟದಿಂದ ಕೂಡಿದೆ. ಸರ್ಕಾರ ವಸ್ತುಸ್ಥಿತಿ ಗಮನಿಸದೇ ವಿಲೀನ ಪ್ರಕ್ರಿಯೆಗೆ ಮುಂದಾಗುವುದು ಸರಿಯಲ್ಲ. ಈಗಾಗಲೇ ವಿವಿಧ ಕಾರ್ಯಕ್ರಮಗಳ ಜಾರಿ ನಂತರವೂ ಶಿಕ್ಷಣದಲ್ಲಿ ಹಿಂದೆ ಉಳಿದಿದ್ದೇವೆ. ಈ ಸ್ಥಿತಿಯಲ್ಲಿಯೇ ಪ್ರೌಢಶಿಕ್ಷಣ-ಪಿಯುಸಿ ವಿಲೀನದ ಮಾತು ಆರಂಭವಾಗಿದೆ ಎಂದು ಹೇಳಿದರು.

ಶಾಸಕ ಮರಿತಿಬ್ಬೇಗೌಡ ಮಾತನಾಡಿ, ಕಾಲ್ಪನಿಕ ಬಡ್ತಿ, ಅನುದಾನರಹಿತ ಸಂಸ್ಥೆಗಳ ಉಪನ್ಯಾಸಕರಿಗೆ ವೈದ್ಯಕೀಯ ಭತ್ಯೆ ಇಲ್ಲದಿರುವುದು, ವೇತನ ತಾರತಮ್ಯ ನಿವಾರಣೆಗೆ ಹೋರಾಟ ನಡೆದಿದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ವಿಷಾದಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರಾಮಕೃಷ್ಣಯ್ಯ ಮಾತನಾಡಿದರು. ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ, ಖಜಾಂಚಿ ಎಂ.ಜಯಣ್ಣ, ಜಿಲ್ಲಾ ಕಾರ್ಯದರ್ಶಿ ಮುತ್ತಯ್ಯ, ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ರಂಗದಾಸೇಗೌಡ, ಎಚ್. ನರಸಿಂಹೇಗೌಡ, ದೇವರಾಜು, ನಿಂಗರಾಜು ಮತ್ತಿತರರು ಇದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.