ADVERTISEMENT

ಪರಂಪರೆ ಸದಾ ಚಲನಶೀಲ: ಲಕ್ಷ್ಮಣರಾವ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:25 IST
Last Updated 20 ಜನವರಿ 2011, 19:25 IST

ಚಿಂತಾಮಣಿ: ಪರಂಪರೆಯು ನಿಂತ ನೀರಾಗದೆ ಸದಾ ಚಲಿಸುತ್ತಿರುತ್ತದೆ. ತಮ್ಮತನವನ್ನು ಉಳಿಸಿಕೊಂಡು ಬದಲಾವಣೆಗೆ ಪ್ರೋತ್ಸಾಹ ನೀಡಬೇಕು ಎಂದು ಕವಿ ಬಿ.ಆರ್.ಲಕ್ಷ್ಮಣರಾವ್ ಇಲ್ಲಿ ಗುರುವಾರ ಅಭಿಪ್ರಾಯಪಟ್ಟರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ‘ಪರಂಪರೆ ಕೂಟ’ ಉದ್ಘಾಟಿಸಿ ಮಾತನಾಡಿ, ಪರಂಪರೆ ಎಂದರೆ ಹಿಂದೆ ಇದ್ದ ಹಾಗೆ ಇರಬೇಕು ಎನ್ನುವುದು ತಪ್ಪು ಕಲ್ಪನೆಯಾಗಿದೆ. ಪರಂಪರೆ ಎನ್ನುವುದು ಸ್ಥಗಿತಗೊಳ್ಳುವುದಿಲ್ಲ, ಕಾಲಕ್ಕೆ ತಕ್ಕಂತೆ ಬದಲಾವಣೆ ಬಯಸುತ್ತದೆ. ಆದರೆ ನಮ್ಮತನ ಉಳಿಸಿಕೊಂಡು ಬದಲಾವಣೆಯಾಗಬೇಕು ಎಂದರು.

ಹಿರಿಯ ಸಾಹಿತಿ ಉತ್ತನೂರು ರಾಜಮ್ಮ ಮಾತನಾಡಿ, ಬದುಕು ಹಾಗೂ ಪರಂಪರೆಯ ವ್ಯತ್ಯಾಸವನ್ನು ಅರಿತುಕೊಳ್ಳಬೇಕು. ಸಂಪ್ರದಾಯ, ಸಂಸ್ಕೃತಿ, ಸಾಹಿತ್ಯ ನಶಿಸದಂತೆ ಉಳಿಸಿಕೊಂಡು ಮುಂದುವರಿಯಬೇಕು. ಗ್ರಾಮೀಣ ಭಾಗಗಳಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಆಚಾರ, ವಿಚಾರ, ಸಂಪ್ರದಾಯಗಳು ಪರಂಪರೆಯ ಅಂಗವಾಗಿವೆ ಎಂದು ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆಯ ಡಾ.ಜಗದೀಶ್ ಮಾತನಾಡಿ, ರಾಜ್ಯದ 155 ತಾಲ್ಲೂಕುಗಳಲ್ಲಿ ಪರಂಪರೆ ಕೂಟ ಸ್ಥಾಪಿಸಲಾಗಿದೆ. ಇತಿಹಾಸದ ಪರಂಪರೆ ಉಳಿಸಿ ಬೆಳೆಸುವ ಸಲುವಾಗಿ ಕಾಲೇಜುಗಳಲ್ಲಿ ಇಂತಹ ಕೂಟ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಉಪನ್ಯಾಸಕ ಎಂ.ಎನ್.ರಘು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಜಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಸಿ.ಬಿ.ಹನುಮಂತಪ್ಪ, ನಿವೃತ್ತ ಪ್ರಾಂಶುಪಾಲ ಪ್ರೊ.ವೆಂಕಟಶಿವಾರೆಡ್ಡಿ, ಕವಿ ಜಿ.ಶ್ರೀನಿವಾಸಯ್ಯ ಮಾತನಾಡಿದರು. ಜನಪದ ಕಲಾವಿದರಾದ ಮುನಿರೆಡ್ಡಿ, ಗಂಗುಲಮ್ಮ, ನರಸಿಂಹಪ್ಪ ಜನಪದಗೀತೆಗಳನ್ನು ಹಾಡಿದರು. ಉಪನ್ಯಾಸಕ ಕೃಷ್ಣಪ್ಪ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.