ಸೋಮವಾರಪೇಟೆ: ಪರಿಸರ ನಾಶದಿಂದ ಮನುಕುಲ ಅಪಾಯಕಾರಿ ಪರಿಸ್ಥಿತಿ ಎದುರಿಸುತ್ತಿದೆ. ಪರಿಸರವನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿ.ಕೆ.ಲೋಕೇಶ್ ಅಭಿಪ್ರಾಯಪಟ್ಟರು.
ಮೈಸೂರಿನ ಓಡಿಪಿ ಸಂಸ್ಥೆ, ನಬಾರ್ಡ್, ಸೋಮವಾರಪೇಟೆಯ 5 ಜಲಾನಯನ ಸಮಿತಿ, ಒಕ್ಕೂಟದ ಆಶ್ರಯದಲ್ಲಿ ಇಲ್ಲಿಯ ಚನ್ನಬಸಪ್ಪ ಸಭಾಂಗಣದಲ್ಲಿ ಸೋಮವಾರ ನಡೆದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಾನವನ ದುರಾಸೆಯಿಂದಾಗಿ ಅರಣ್ಯ ಪ್ರದೇಶಗಳು ನಾಶವಾಗುತ್ತಿದ್ದು, ಜಾಗತಿಕ ತಾಪಮಾನ ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸಬೇಕು ಎಂದರು.
ನಿವೃತ್ತ ಅರಣ್ಯ ಸಂರ‌್ಷಣಾಧಿಕಾರಿ ಕೆ.ಎಂ.ಚಿಣ್ಣಪ್ಪ ಮಾತನಾಡಿ ಪರಿಸರದ ಮೇಲೆ ಸತತವಾಗಿ ನಡೆಸುತ್ತಿರುವ ಮನುಷ್ಯನ ದಾಳಿಯ ಪರಿಣಾಮವಾಗಿ ಹಲವಾರು ವಿಕೋಪಗಳು ಸಂಭವಿಸುತ್ತಿವೆ. ಪರಿಸರ ಕಾಳಜಿ ಕೇವಲ ತೋರಿಕೆಯಾಗದೆ ಎಲ್ಲರೂ ಗಂಭೀರವಾಗಿ ಚಿಂತಿಸಬೇಕು ಎಂದರು.
ಓಡಿಪಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಕೆ.ಎ.ವಿಲಿಯಂ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಉಪನಿರ್ದೇಶಕ ಸ್ಟ್ಯಾನಿ ಡಿ. ಆಲ್ಮೆಡಾ ಮಾತನಾಡಿದರು. ವಲಯ ಅರಣ್ಯಾಧಿಕಾರಿ ವಿ.ಪಿ. ಕಾರ್ಯಪ್ಪ, ಜಲಾನಯನ ಯೋಜನೆ ಒಕ್ಕೂಟದ ಅಧ್ಯಕ್ಷ ಎಸ್.ಎಂ.ಡಿಸಿಲ್ವಾ ಉಪಸ್ಥಿತರಿದ್ದರು. ವಿನ್ಸಿ ಪಿಂಟೋ ಸ್ವಾಗತಿಸಿದರು. ಸಂಯೋಜಕ ರಮೇಶ್ ನಿರೂಪಿಸಿದರು. ದಯಾನಂದ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.