ADVERTISEMENT

ಪರೀಕ್ಷಾ ಕೇಂದ್ರಕ್ಕೆ ಅಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2012, 19:30 IST
Last Updated 3 ಆಗಸ್ಟ್ 2012, 19:30 IST

ಕೋಲಾರ: ಪ್ರಶ್ನೆ ಪತ್ರಿಕೆಗಳು ಬಹಿರಂಗವಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ನಗರ ಮಹಿಳಾ ಸರ್ಕಾರಿ ಐಟಿಐಗೆ ಶುಕ್ರವಾರ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ನಗರ ಕೇಂದ್ರದಲ್ಲಿ ಪ್ರಶ್ನೆಪತ್ರಿಕೆ ಬಹಿರಂಗಗೊಂಡಿರುವುದು ಕಂಡುಬಂದಿಲ್ಲ. ಆದರೆ ಪ್ರಶ್ನೆಪತ್ರಿಕೆ ಬಹಿರಂಗಗೊಂಡಿರುವುದು ನಿಜವಾಗಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಬೇಕು ಎಂದು ತಹಶೀಲ್ದಾರರು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದಾರೆ.

ಬೆಳಿಗ್ಗೆ ವೆಲ್ಡರ್ ವಿಷಯದ ಪರೀಕ್ಷೆ ಮತ್ತು ಮಧ್ಯಾಹ್ನ ಫಿಟ್ಟರ್ ವಿಷಯದ ಪರೀಕ್ಷೆಗಳು ನಿಗದಿಯಾಗಿದ್ದವು. ಆದರೆ ಪರೀಕ್ಷೆ ಶುರುವಾದ 20 ನಿಮಿಷಗಳ ಬಳಿಕ ಪ್ರಶ್ನೆಪತ್ರಿಕೆಗಳು ಬಹಿರಂಗಗೊಂಡಿವೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ತಹಶೀಲ್ದಾರ್ ಡಾ.ವೆಂಕಟೇಶಮೂರ್ತಿ ಭೇಟಿ ನೀಡಿದ್ದರು. ಪ್ರಕರಣದ ಕುರಿತು ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡಬೇಕು ಎಂದು ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಸೂಚಿಸಿದ್ದರು.
 
ಬೆಳಿಗ್ಗೆ ನಿಗದಿತ ಸಮಯಕ್ಕೆ ಸರಿಯಾಗಿ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ತಂದು ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಆದರೆ ಬಹಿರಂಗಗೊಂಡಿರುವ ಬಗ್ಗೆ ನಮಗೆ ಯಾವ ಮಾಹಿತಿಯೂ ಇಲ್ಲ ಎಂದು ಪ್ರಾಂಶುಪಾಲ ಆರ್ಮುಗಂ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಜುಲೈ 29ರಂದು ಶಿಗ್ಗಾವಿಯ ದೀಪಾ ಜೆರಾಕ್ಸ್‌ನಿಂದ ಪ್ರಶ್ನೆಪತ್ರಿಕೆ ಫ್ಯಾಕ್ಸ್ ಆಗಿದೆ. ಹೀಗಾಗಿ ಕೋಲಾರದಲ್ಲಿ ಬಹಿರಂಗಗೊಂಡಿರುವುದು ಕಂಡುಬಂದಿಲ್ಲ. ಮಧ್ಯಾಹ್ನ 1 ಗಂಟೆಗೆ ಪರೀಕ್ಷೆ ಇತ್ತು. 1.45ಕ್ಕೆ ಕಾಲೇಜಿಗೆ ಭೇಟಿ ನೀಡಿದೆ. ಪ್ರಶ್ನೆಪತ್ರಿಕೆ ಬಹಿರಂಗಗೊಂಡಿರುವುದು ನಿಜ. ಎಲ್ಲಿಂದ ಬಹಿರಂಗಗೊಂಡಿದೆ ಎಂಬ ಬಗ್ಗೆ ತನಿಖೆ ನಡೆಸುವಂತೆ ಕೋರಿ ಜಿಲ್ಲಾಧಿಕಾರಿಗೆ ವರದಿ ನೀಡಲಾಗಿದೆ ಎಂದು ಡಾ.ವೆಂಕಟೇಶಮೂರ್ತಿ ತಿಳಿಸಿದ್ದಾರೆ.

ಪರೀಕ್ಷೆ ಜಾಗೃತ ದಳದ ಸದಸ್ಯರಾದ ಜಿಲ್ಲಾ ಉದ್ಯೋಗಾಧಿಕಾರಿ ಕೆ.ಶ್ರೀನಿವಾಸ್, ಸಹಾಯಕ ಉದ್ಯೋಗಾಧಿಕಾರಿ ಅಶ್ವಥನಾರಾಯಣ ಐಟಿಐಗೆ ಭೇಟಿ ನೀಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಭಗವಾನ್‌ದಾಸ್ ಪ್ರತ್ಯೇಕವಾಗಿ ಭೇಟಿ ನೀಡಿ ಮಾಹಿತಿ ಪಡೆದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.