ADVERTISEMENT

ಪೌರಕಾರ್ಮಿಕರ ಸಾವು: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ತುಮಕೂರು: ಕೆಜಿಎಫ್‌ನಲ್ಲಿ ಪಿಟ್‌ಗುಂಡಿ ಸ್ವಚ್ಛತೆ ಮಾಡುವ ಸಮಯದಲ್ಲಿ ಮೂವರು ಪೌರ ಕಾರ್ಮಿಕರು ಮೃತಪಟ್ಟ ಘಟನೆಗೆ ಸರ್ಕಾರವೇ ಹೊಣೆ ಎಂದು ಆರೋಪಿಸಿ ಸಿಐಟಿಯು ನೇತೃತ್ವದಲ್ಲಿ ಜಿಲ್ಲಾ ಪೌರ ಕಾರ್ಮಿಕರ ಸಂಘದ ಕಾರ್ಯಕರ್ತರು ನಗರದ ಟೌನ್‌ಹಾಲ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಪೌರಕಾರ್ಮಿಕರ ಸಾವನ್ನು ಕೊಲೆ ಎಂದು ಪರಿಗಣಿಸಬೇಕು ಹಾಗೂ ಕೋಲಾರ ಜಿಲ್ಲಾಧಿಕಾರಿ, ಕೆಜಿಎಫ್ ನಗರಸಭೆ ಆಯುಕ್ತರ ಮೇಲೆ ಕೊಲೆ ಮೊಕದ್ದಮೆ ದಾಖಲಿಸಬೇಕೆಂದು ಆಗ್ರಹಿಸಿದರು.

ಮೃತರ ಕುಟುಂಬಕ್ಕೆ ತಲಾ ರೂ. 10 ಲಕ್ಷ ಪರಿಹಾರ ನೀಡಬೇಕು. ಮೃತ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ರಾಜ್ಯದಲ್ಲಿ ದುಡಿಯುತ್ತಿರುವ ಗುತ್ತಿಗೆ ಆಧಾರದ ಪೌರ ಕಾರ್ಮಿಕರನ್ನು ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಗತಿಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ಪಿಟ್‌ಗುಂಡಿಯಲ್ಲಿ ಬಿದ್ದು ಪೌರಕಾರ್ಮಿಕರು ಸಾಯಲು ಆಡಳಿತದ ನಿರ್ಲಕ್ಷ್ಯವೇ ಕಾರಣವಾಗಿದ್ದು, ಜಿಲ್ಲಾಧಿಕಾರಿ ವಿರುದ್ಧ ಕೊಲೆ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿದರು.

ಪ್ರಾಂತ ರೈತ ಸಂಘದ ಮುಖಂಡ ಬಿ.ಉಮೇಶ್, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸಯ್ಯದ್ ಮುಜೀಬ್, ಸೈಯದ್ ಅಲ್ತಾಫ್, ಪೌರ ಕಾರ್ಮಿಕರ ಸಂಘದ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ, ಮುಖಂಡರಾದ ವೆಂಕಟೇಶ್, ಚಂದ್ರಪ್ಪ ಮುಂತಾದವರು ಮಾತನಾಡಿದರು.

ಪ್ರತಿಭಟನೆ ನೇತೃತ್ವವನ್ನು ಮುಖಂಡರಾದ ಕೆ.ನರಸಿಂಹಮೂರ್ತಿ, ರವಿ, ನರಸಿಂಹಮೂರ್ತಿ, ಕದರಪ್ಪ, ಕೆಂಪಣ್ಣ, ಶೆಟ್ಟಳಯ್ಯ, ದರ್ಶನ್, ಸರ್ದಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.