ADVERTISEMENT

ಪ್ರಗತಿಯಲ್ಲಿ ರೈಲು ಸಂಪರ್ಕ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST
ಪ್ರಗತಿಯಲ್ಲಿ ರೈಲು ಸಂಪರ್ಕ ಕಾಮಗಾರಿ
ಪ್ರಗತಿಯಲ್ಲಿ ರೈಲು ಸಂಪರ್ಕ ಕಾಮಗಾರಿ   

ಚಿಕ್ಕಬಳ್ಳಾಪುರ:  ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗದಲ್ಲಿ ಹಳಿ ಅಳವಡಿಕೆ, ಸೇತುವೆ ನಿರ್ಮಾಣ ಮತ್ತು ಇತರ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟದವರೆಗೆ ಹಳಿ ಅಳವಡಿಕೆಗಾಗಿ ಭಾರಿ ಪ್ರಮಾಣದಲ್ಲಿ ಮಣ್ಣಿನ ರಾಶಿ ಮತ್ತು ಜಲ್ಲಿಕಲ್ಲು ಹಾಕಲಾಗಿದೆ. ಶಿಡ್ಲಘಟ್ಟದಿಂದ ಚಿಂತಾಮಣಿ ಮಾರ್ಗದಲ್ಲಿ ಅಲ್ಲಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ.

ರೈಲ್ವೆ ಹಳಿ ಕಾಮಗಾರಿಗೆಂದೇ ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯದಿಂದ ಬಂದಿರುವ ಕೂಲಿ ಕಾರ್ಮಿಕರು ಅಲ್ಲಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡಿದ್ದಾರೆ. ಅಲ್ಲಲ್ಲಿ ಜಲ್ಲಿಕಲ್ಲು ರಾಶಿ ಹಾಕುತ್ತಾ ಕಾಮಗಾರಿ ಮುಂದುವರಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶಿಡ್ಲಘಟ್ಟಕ್ಕೆ ಭೇಟಿ ನೀಡಿದ್ದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿ ಯಪ್ಪ ಅವರು ಮುಂದಿನ ಜೂನ್ ವೇಳೆಗೆ ರೈಲು ಕಾಮಗಾರಿ ಪೂರ್ಣಗೊಳಿಸಿ, ಚಿಕ್ಕಬಳ್ಳಾಪರ- ಚಿಂತಾಮಣಿ ನಡುವೆ ರೈಲು ಸಂಚಾರಕ್ಕೆ ಚಾಲನೆ ನೀಡಲಾಗುವುದು. ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಸೇತುವೆ ನಿರ್ಮಾಣ ಕಾಮಗಾರಿ ಬಾಕಿ ಉಳಿದಿದೆ ಎಂದು ತಿಳಿಸಿದ್ದರು.

~ಹಲವು ವರ್ಷಗಳ ನಂತರ ರೈಲು ಕಾಮಗಾರಿ ಆರಂಭಗೊಂಡಿದೆ. ಆದರೆ ಕಾಮಗಾರಿ ತ್ವರಿಗತಗತಿಯಲ್ಲಿ ಪೂರ್ಣಗೊಂಡರೆ ಎಲ್ಲರಿಗೂ ಅನುಕೂಲವಾಗುತ್ತದೆ. ರೈಲು ಸಂಪರ್ಕ ಕಲ್ಪಿಸಿದರೆ ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ ಮುಂತಾದ ಕಡೆ ಕೆಲವೇ ನಿಮಿಷಗಳಲ್ಲಿ ತಲುಪಲು ಸಾಧ್ಯವಾಗುತ್ತದೆ. ವಾಹನ ದಟ್ಟಣೆಗೂ ಅವಕಾಶ ಇರುವುದಿಲ್ಲ~ ಎಂದು ರೈಲ್ವೆ ಹೋರಾಟ ಸಮಿತಿ ಮುಖಂಡರು ~ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.