ADVERTISEMENT

ಪ್ರತ್ಯೇಕ ಅಪಘಾತ: ಏಳು ಜನರ ಸಾವು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 19:30 IST
Last Updated 25 ಏಪ್ರಿಲ್ 2012, 19:30 IST

ವಿಜಾಪುರ/ಸಂಕೇಶ್ವರ: ವಿಜಾಪುರ ಜಿಲ್ಲೆಯ ಬಬಲೇಶ್ವರ ಮತ್ತು ಬೆಳಗಾವಿ ಜಿಲ್ಲೆಯ ಸಂಕೇಶ್ವರ ಹಾಗೂ ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 7 ಜನರು ಸಾವಿಗೀಡಾಗಿದ್ದಾರೆ.

ವಿಜಾಪುರ ತಾಲ್ಲೂಕಿನ ಬಬಲೇಶ್ವರ ಹತ್ತಿರ ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ಘಟನೆ ಬುಧವಾರ ನಡೆದಿದೆ.

ಕಾರು ಚಾಲಕ ಹೈದ್ರಾಬಾದ್‌ನ ರಮೇಶ ಶಾಂತಣ್ಣ ಯಾದವ್ (28), ಹೈದ್ರಾಬಾದ್‌ನ ನವ್ಯಶ್ರೀ ಎನ್. ಪ್ರಸಾದ್ ನಾಯ್ಡು (15) ಮೃತಪಟ್ಟಿದ್ದು, ಆರ್. ಚಿನ್ನಬಾಬು ಮಲಗಜ್ಜಯ್ಯ (50), ಆರ್.ರೋಹಿಣಿ ಚಿನ್ನಬಾಬು ನಾಯ್ಡು (40) ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ಪಣಜಿಯಿಂದ ಹೈದ್ರಾಬಾದ್‌ಗೆ ಹೊರಟಿತ್ತು. ಬಬಲೇಶ್ವರ ಹತ್ತಿರ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಕೇಶ್ವರ ವರದಿ: ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಹಳೆ ಪಿ.ಬಿ. ರಸ್ತೆಯಲ್ಲಿ ಮಂಗಳವಾರ ಮಧ್ಯರಾತ್ರಿ ಟ್ರಕ್ ಮತ್ತು ದ್ವಿಚಕ್ರ ವಾಹನ ಮಧ್ಯೆ ಡಿಕ್ಕಿ ಸಂಭವಿಸಿ, ದ್ವಿಚಕ್ರ ವಾಹನದಲ್ಲಿದ್ದ ಮೂವರು ಯುವಕರು ಮೃತಪಟ್ಟಿದ್ದಾರೆ.

ಮೃತರನ್ನು ಕಣಗಲಾ ಗ್ರಾಮದ ರೋಹಿತ ಹವಾಲ್ದಾರ (30), ಅನಿಲ್ ಹವಾಲ್ದಾರ (32) ಮತ್ತು ಚೇತನ ಕಾಂಬಳೆ (28) ಎಂದು ಗುರುತಿಸಲಾಗಿದೆ.

ಕಣಗಲಾ ಕಡೆಯಿಂದ ಸಂಕೇಶ್ವರಕ್ಕೆ ದ್ವಿಚಕ್ರ ವಾಹನದಲ್ಲಿ  ಮೂವರು ಯುವಕರು ಬರುತ್ತಿದ್ದರು. ಹಳೇ ಪಿ.ಬಿ.ರಸ್ತೆಯಲ್ಲಿ ಕಾರಿಕಾಜಿ ಪೆಟ್ರೋಲ್ ಪಂಪ್ ಹತ್ತಿರ ಟ್ರಕ್ ಮತ್ತು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿತು.  ಸಂಕೇಶ್ವರ ಪೋಲಿಸರು ಪ್ರಕರಣ ದಾಖಲಿಸಿಕೊಂಡು, ಟ್ರಕ್ ಚಾಲಕನನ್ನು ಬಂಧಿಸಿದ್ದಾರೆ.

ಬಾಗಲಕೋಟೆ ವರದಿ: ಟಂಟಂ ಮತ್ತು ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಯಡಹಳ್ಳಿ ಸಮೀಪ ಮಂಗಳವಾರ ರಾತ್ರಿ ನಡೆದಿದೆ.

ಬೀಳಗಿ ತಾಲ್ಲೂಕಿನ ತೆಗ್ಗಿ ಗ್ರಾಮದಲ್ಲಿ ನಡೆಯಲಿದ್ದ ಮದುವೆಗೆ ಬಾಗಲಕೋಟೆಯಿಂದ ಟಂಟಂ ಮೂಲಕ ಹೊರಟಿದ್ದ ಶಿಕ್ಕೇರಿಯ ರಂಗಪ್ಪ ಪೂಜಾರಿ (51) ಮತ್ತು ಬಾಗಲಕೋಟೆಯ ಮಾರುತಿ ಮನಗೂಳಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.