ADVERTISEMENT

ಪ್ರಾಣಕ್ಕೆ ಕುತ್ತಾಗಲಿರುವ ಟಂಟಂ ಪ್ರಯಾಣ ?

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 19:10 IST
Last Updated 25 ಫೆಬ್ರುವರಿ 2011, 19:10 IST

ಹುಮನಾಬಾದ್: ಸಂಚಾರ ನಿಯಮ ಉಲ್ಲಂಘಿಸಿ ಪ್ರಯಾಣಿಕರನ್ನು ತುಂಬಿಕೊಂಡು ಹೋಗುವ ವಾಹನ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡುತ್ತಿರುವುದರ ಮಧ್ಯೆಯೂ ತಾಲ್ಲೂಕಿನ ದುಬಲಗುಂಡಿ ಅಕ್ಕಪಕ್ಕದ ಕೆಲ ಟಂಟಂ ಮಾಲೀಕರು ಸಾಮರ್ಥ್ಯ ಮೀರಿ ರಾಜಾರೋಷವಾಗಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದಾರೆ.

ಗ್ರಾಮೀಣ ಭಾಗದ ಮಧ್ಯಮ ಹಾಗೂ ಕೂಲಿ ಕಾರ್ಮಿಕ ವರ್ಗದವರು ಕಡಿಮೆ ಖರ್ಚಿನಲ್ಲಿ ಕೆಲಸ ಆಗುತ್ತದೆ ಎಂಬಕಾರಣಕ್ಕಾಗಿ ತಮ್ಮ ಮಕ್ಕಳನ್ನು ಟಂಟಂಗಳಲ್ಲಿ ಬರುವಂತೆ ಸೂಚಿಸುತ್ತಿದ್ದಾರೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಗಳಿಸಬಹುದು ಎನ್ನುವ ದೂರಾಸೆಯಿಂದ ಟಂಟಂ ಮಾಲೀಕರು ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಕೂಡಿಸಿಕೊಂಡು ಹೋಗುತ್ತಿರುವುದು ಪ್ರಜ್ಞಾವಂತ ನಾಗರೀಕರನ್ನು ಕೆರಳಿಸಿದೆ. ವಿಷಯ ಕುರಿತು ಮಾಹಿತಿ ಇದ್ದರೂ ಲಂಚದ ಆಸೆಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎನ್ನುವುದು ಸಾರ್ವಜನಿಕರ ಗಂಭೀರ ಆರೋಪವಾಗಿದೆ.

 ಸಂಚಾರ ನಿಯಮ ಉಲ್ಲಂಘಿಸಿ, ಈ ರೀತಿ ಅಮಾಯಕ ಹಾಗೂ ಮುಗ್ದ ಮಕ್ಕಳನ್ನು ವಾಹನಗಳಲ್ಲಿ ತುಂಬಿಕೊಂಡು ಹೋಗಲು ಅವಕಾಶ ನೀಡುವುದುರಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಶಾಲೆಬಿಟ್ಟು ಮನೆಗೆ ಬರುವುದಕ್ಕೆ ಕೊಂಚ ವಿಳಂಬವಾದರೂ ಚಿಂತೆಯಿಲ್ಲ. ಸರ್ಕಾರಿ ವಾಹನಗಳಲ್ಲೇ ಮಕ್ಕಳನ್ನು ಸಂಚರಿಸುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಗತ್ಯ ಇರುವ ಗ್ರಾಮಗಳಿಗೆ ಆದ್ಯತೆ ಮೇರೆಗೆ ಈಶಾನ್ಯ ಸಾರಿಗೆ ಸಂಸ್ಥೆ ವಾಹನ ಸೌಕರ್ಯ ಕಲ್ಪಿಸಲು ಮುಂದಾಗುವ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪುಗೊಳ್ಳುವುದಕ್ಕೆ ಸಹಕರಿಸಬೇಕು ಎಂದು ಶೋಷಿತ ಸೇವಾದಳ ಜಿಲ್ಲಾ ಅಧ್ಯಕ್ಷ ಸತೀಶ ವಿ . ಕಲಾ, ಓಂಕಾರ ಜೆ.ಆಮ್ಣೆ, ಬಾಬುರಾವ ಕುಲಕರ್ಣಿ, ದೇವೀಂದ್ರ ಭಾವಿಕಟ್ಟಿ ಹಾಗೂ ವಿವಿಧ ಗ್ರಾಮಗಳ ಜನ ಈ ಮೂಲಕ ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.